ADVERTISEMENT

ಗಡಿಯಲ್ಲಿ ‘ಬೀಟಿಂಗ್ ರಿಟ್ರೀಟ್’ ಆರಂಭ: ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ

ಪಿಟಿಐ
Published 20 ಮೇ 2025, 4:54 IST
Last Updated 20 ಮೇ 2025, 4:54 IST
<div class="paragraphs"><p>ಭಾರತ ಪಾಕ್‌ ಗಡಿಯಲ್ಲಿ ನಡೆಯುವ&nbsp;ಬೀಟಿಂಗ್‌ ರಿಟ್ರೀಟ್‌ (ಸಂಗ್ರಹ ಚಿತ್ರ)</p></div>

ಭಾರತ ಪಾಕ್‌ ಗಡಿಯಲ್ಲಿ ನಡೆಯುವ ಬೀಟಿಂಗ್‌ ರಿಟ್ರೀಟ್‌ (ಸಂಗ್ರಹ ಚಿತ್ರ)

   

ಪಿಟಿಐ ಚಿತ್ರ

ನವದೆಹಲಿ: ಭಾರತ–ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್‌ನ 3 ಚೆಕ್‌ಪೋಸ್ಟ್‌ಗಳಲ್ಲಿ ಸ್ಥಗಿತಗೊಂಡಿದ್ದ ಕವಾಯತನ್ನು (ಬೀಟಿಂಗ್‌ ರಿಟ್ರೀಟ್‌) ವೀಕ್ಷಿಸಲು ಸಾರ್ವಜನಿಕರಿಗೆ ನಾಳೆಯಿಂದ (ಮೇ 21) ಅವಕಾಶ ನೀಡುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತಿಳಿಸಿದೆ.

ADVERTISEMENT

ಇಂದಿನಿಂದ (ಮಂಗಳವಾರ) ಕವಾಯತು ಪುನರಾರಂಭಗೊಳ್ಳಲಿದೆ. ಆದರೆ ಇದು ಮಾಧ್ಯಮದವರಿಗೆ ಮಾತ್ರ ತೆರೆದಿರುತ್ತದೆ. ಬುಧವಾರದಿಂದ ಸಾರ್ವಜನಿಕರು ಭಾಗವಹಿಸಬಹುದು, ಪ್ರತಿದಿನ ಸಂಜೆ 6 ಗಂಟೆಗೆ ಕವಾಯತು ನಡೆಯುತ್ತದೆ ಎಂದು ಪಂಜಾಬ್ ಗಡಿಭಾಗದ ಜಲಂಧರ್‌ನ ಪ್ರಧಾನ ಕಚೇರಿ ತಿಳಿಸಿದೆ.  

ಕವಾಯತಿನ ಬಳಿಕ ಬಿಎಸ್‌ಎಫ್ ಪಡೆಗಳು ಪಾಕಿಸ್ತಾನ ರೇಂಜರ್‌ಗಳೊಂದಿಗೆ ಹಸ್ತಲಾಘವ ಮಾಡುವುದಿಲ್ಲ. ಜತೆಗೆ ಧ್ವಜ ಇಳಿಸುವ ಪ್ರಕ್ರಿಯೆಯಲ್ಲಿ ಗೇಟ್‌ಗಳನ್ನು ತೆರೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ 12 ದಿನಗಳಿಂದ ಸಾರ್ವಜನಿಕರ ಉಪಸ್ಥಿತಿ ಇರದಿದ್ದರೂ ಬಿಎಸ್‌ಎಫ್ ಪಡೆಗಳು ಪ್ರತಿದಿನ ಧ್ವಜವನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತ–ಪಾಕಿಸ್ತಾನದ ನಡುವಿನ ಪರಿಸ್ಥಿತಿ ವಿಷಮಗೊಂಡಿದ್ದ ಕಾರಣ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಮೇ.8ರಂದು ಕವಾಯತನ್ನು  ಸ್ಥಗಿತಗೊಳಿಸಲಾಗಿತ್ತು. ಅಮೃತಸರದ ಅಟ್ಟಾರಿ–ವಾಘಾ ಗಡಿ, ಫಿರೋಜ್‌ಪುರದ ಹುಸೈನಿವಾಲಾ, ಫಾಜಿಲ್ಕಾ ಜಿಲ್ಲೆಯ ಸಡ್ಕಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿದಿನ ಸಂಜೆ ‘ಬೀಟಿಂಗ್‌ ರಿಟ್ರೀಟ್‌’ ನಡೆಯುತ್ತಿತ್ತು. ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಬೆನ್ನಲ್ಲೇ ರಿಟ್ರೀಟ್‌ ಸ್ಥಗಿತಗೊಳಿಸಿರುವುದು ಮಹತ್ವ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.