ADVERTISEMENT

ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ: ಬಿಜೆಪಿ ಆರೋಪ

‘ರಾಜ್ಯ ಪ್ರಾಯೋಜಿತ ಹಿಂಸಾಚಾರ, ಇದು ಫ್ಯಾಸಿಸ್ಟ್‌ ಸರ್ಕಾರ‘

ಪಿಟಿಐ
Published 4 ಮೇ 2021, 10:42 IST
Last Updated 4 ಮೇ 2021, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದು ರಾಜ್ಯ ಸರ್ಕಾರದ ಪ್ರಾಯೋಜಿತ ಹಿಂಸಾಚಾರ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ.

ಮಂಗಳವಾರ ಆನ್‌ಲೈನ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ‘ರಾಜ್ಯ ಸರ್ಕಾರದ ಪ್ರಾಯೋಜಿತ ಹಿಂಸಾಚಾರದಿಂದ ಬಂಗಾಳ ಹೊತ್ತಿ ಉರಿಯುತ್ತಿದೆ. ದೇಶದ ಚುನಾವಣಾ ಇತಿಹಾಸದಲ್ಲೇ ಇಂತಹ ದೃಶ್ಯಗಳು ಹಿಂದೆಂದೂ ಕಂಡಿಲ್ಲ‘ ಎಂದು ಆರೋಪಿಸಿದ್ದಾರೆ.

‘ಚುನಾವಣೆಗಳನ್ನು ಗೆದ್ದವರು ‌ನಂತರದಲ್ಲಿ ವಿನೀತವಾಗಿ ನಡೆದುಕೊಳ್ಳುವ ಬದಲು, ಹಿಂಸಾಚಾರ ನಡೆಸುತ್ತಿರುವುದು ದುಃಖಕರ ಸಂಗತಿ‘ ಎಂದು ಅವರು ಹೇಳಿದ್ದಾರೆ.

ADVERTISEMENT

ಪಕ್ಷದ ಕಾರ್ಯಕರ್ತರ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಬಿತ್‌ ಪಾತ್ರಾ, ಬಂಗಾಳದ ‘2.28 ಕೋಟಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷಕ್ಕೆ ಮತ ಹಾಕುವುದು ಅವರ ಹಕ್ಕಲ್ಲವೇ‘ ಎಂದು ಪ್ರಶ್ನಿಸಿದರು.

‘ಮಮತಾ ಜಿ ನೀವು ಗೆದ್ದಿದ್ದೀರಿ. ಎಲ್ಲರೂ ನಿಮ್ಮನ್ನು ಅಭಿನಂದಿಸಿದ್ದಾರೆ. ನೀವು ಒಬ್ಬ ಮಹಿಳೆ ಮತ್ತು ಬಂಗಾಳದ ಮಗಳು. ಈಗ ಹತ್ಯೆಯಾಗುತ್ತಿರುವ ಹಾಗೂ ಅತ್ಯಾಚಾರಕ್ಕೊಳಗಾಗುತ್ತಿರುವ ಈ ಮಹಿಳೆಯರು ಬಂಗಾಳದ ಮಕ್ಕಳೆಂದು ನಿಮಗೆ ಎನ್ನಿಸುವುದಿಲ್ಲವೇ? ಎಂದು ಪಾತ್ರಾ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮತ್ತೊಬ್ಬ ಮುಖಂಡ ಅನಿರ್ಬನ್ ಗಂಗೂಲಿ, ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ ಹಾಕಿದ ಜನರು, ಈಗ ಬಂಗಾಳದಲ್ಲಿ ನಡೆಯುತ್ತಿರುವ ಘಟನೆಗಳು ಎಷ್ಟು ಸರಿ ಎಂದು ಪ್ರಶ್ನಿಸಬೇಕು‘ಎಂದು ಹೇಳಿದ್ದಾರೆ

‘ಟಿಎಂಸಿ ಈಗ ಏನು ಮಾಡುತ್ತಿದೆಯೋ, ಅದು ಜರ್ಮನಿಯ ಫ್ಯಾಸಿಸಂ ಆಡಳಿತದಲ್ಲಿ ನಾಜಿಗಳು ಮಾಡಿದ ಕೃತ್ಯಗಳಿಗೆ ‌ಸಮೀಪದಲ್ಲಿದೆ. ಇದು ಫ್ಯಾಸಿಸ್ಟ್ ಸರ್ಕಾರ. ಇಂತಹ ಘಟನೆಗಳು ಪ್ರಜಾಪ್ರಭುತ್ವ ಸರ್ಕಾರದಲ್ಲಿ ನಡೆಯುವುದಿಲ್ಲ‘ ಎಂದು ಗಂಗೂಲಿ ಹೇಳಿದರು. ‘ಇಷ್ಟೆಲ್ಲ ನಡೆಯುತ್ತಿದ್ದರೂ ಬೇರೆ ಪಕ್ಷಗಳ ರಾಜಕೀಯ ನಾಯಕರು ಎಲ್ಲಿದ್ದಾರೆ. ಅವರು ಏಕೆ ಮೌನವಾಗಿದ್ದಾರೆ‘ ಎಂದು ಪ್ರಶ್ನಿಸಿದರು.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು, ತಮ್ಮ ಪಕ್ಷದ ನಾಲ್ವರು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಸೋಮವಾರ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.