ADVERTISEMENT

3ನೇ ಅಲೆಗೆ ಪೂರ್ವ ಸಿದ್ಧತೆ; ಮಹಿಳೆಯರಿಗೆ ಹೆಚ್ಚಿನ ಕೋವಿಡ್‌ ಹಾಸಿಗೆಗಳು ನಿಗದಿ

ಪಿಟಿಐ
Published 20 ಜೂನ್ 2021, 6:27 IST
Last Updated 20 ಜೂನ್ 2021, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ‘ಪಶ್ಚಿಮ ಬಂಗಾಳ ಸರ್ಕಾರವು ಕೋವಿಡ್‌ ಮೂರನೇ ಅಲೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ’ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ 26,000 ಕೋವಿಡ್‌ ಹಾಸಿಗೆಗಳ ಲಿಂಗಾನುಪಾತದಲ್ಲಿ ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಪುರುಷರಿಗೆ ಹೆಚ್ಚಿನ ಹಾಸಿಗೆಗಳನ್ನು ನಿಗದಿ ಮಾಡಲಾಗಿದ್ದು, 60:40 ಲಿಂಗಾನುಪಾತವಿದೆ. ಇದನ್ನು ಅದಲು ಬದಲು ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಮಹಿಳೆಯರಿಗೆ ಹಾಸಿಗೆಯನ್ನು ಹೆಚ್ಚಿಸಿ ಲಿಂಗಾನುಪಾತವನ್ನು 40:60 ಮಾಡಲು ಮುಂದಾಗಿದೆ’ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಜಯ್ ಚಕ್ರವರ್ತಿ ಅವರು ಹೇಳಿದರು.

‘ಸೋಂಕಿನ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದರು. ಹಾಗಾಗಿ ಮಕ್ಕಳೊಂದಿಗೆ ತಾಯಿಯರಿಗೂ ಸೋಂಕು ತಗುಲುವ ಸಾಧ್ಯತೆಗಳಿವೆ. ಈ ದೃಷ್ಟಿಯಿಂದ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಶೇಕಡ 5ರಷ್ಟು ಮತ್ತು ಕೋವಿಡ್‌ ರೋಗಿಗಳಿಗೆ ತೀವ್ರ ಅವಲಂಬನೆ ಘಟಕದಲ್ಲಿ (ಎಚ್‌ಡಿಯು) ಶೇಕಡ 10ರಷ್ಟು ಹಾಸಿಗೆಗಳನ್ನು ಮಹಿಳೆಯರಿಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಹೇಳಿದರು.

‘ಮಕ್ಕಳ ತೀವ್ರ ನಿಗಾ ಘಟಕ(ಪಿಐಸಿಯು) ಮತ್ತು ಎಚ್‌ಡಿಯುನಲ್ಲಿ ಬೆಡ್‌ಗಳ ಸಂಖ್ಯೆಯನ್ನು ಕ್ರಮವಾಗಿ 500 ಮತ್ತು 1,000ಕ್ಕೆ ಹೆಚ್ಚಿಸಲು ಸರ್ಕಾರ ಚಿಂತಿಸಿದೆ. ಜಲಪಾಯ್‌ಗುರಿ, ಕೂಚ್‌ ಬಿಹಾರ್‌, ಉತ್ತರ ದಿನಜ್‌ಪುರ, ಪುರುಲಿಯಾ, ರಾಮ್‌ಪುರ್ಹತ್ ಮತ್ತು ಡೈಮಂಡ್ ಹಾರ್ಬರ್‌ನಲ್ಲಿ ಆರು ಹೊಸ ಪಿಐಸಿಯುಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.