ADVERTISEMENT

ಆಮೆಗತಿಯಲ್ಲಿ ಬೆಂಗಳೂರು – ಸತ್ಯಮಂಗಲಂ ರೈಲು ಯೋಜನೆ ಕಾಮಗಾರಿ

ಮೊದಲ ಸ್ಥಾನದ ಕುಖ್ಯಾತಿ

ಮಂಜುನಾಥ್ ಹೆಬ್ಬಾರ್‌
Published 25 ಜುಲೈ 2022, 20:16 IST
Last Updated 25 ಜುಲೈ 2022, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದ ಅನೇಕ ಯೋಜನೆಗಳು ದಶಕಗಳಿಂದ ಕುಂಟುತ್ತಾ ಸಾಗಿರುವುದು ಹೊಸದೇನಲ್ಲ. ಆದರೆ, ಈಗ ಬೆಂಗಳೂರು– ಸತ್ಯಮಂಗಲಂ ರೈಲು ಯೋಜನೆಯು (ಬೆಂಗಳೂರು– ಚಾಮರಾಜನಗರ ರೈಲು ಪರಿಷ್ಕೃತ ಯೋಜನೆ) ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕೇಂದ್ರ ಸರ್ಕಾರದ ಮೂಲಸೌಕರ್ಯ ಯೋಜನೆಗಳಲ್ಲಿ ಅತ್ಯಂತ ವಿಳಂಬವಾಗಿ ಅನುಷ್ಠಾನವಾಗುತ್ತಿರುವ ಯೋಜನೆ ಇದು ಎಂದು ಕೇಂದ್ರ ಸರ್ಕಾರವೇ ಪಟ್ಟಿ ಮಾಡಿದೆ.

ರಾಜ್ಯಸಭೆಯಲ್ಲಿ ಸಿಪಿಎಂ ಸದಸ್ಯ ಬಿನೋಯ್‌ ವಿಶ್ವಂ ಅವರ ಪ್ರಶ್ನೆಗೆ ಸೋಮವಾರ ಲಿಖಿತ ಉತ್ತರ ನೀಡಿರುವ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ರಾಜ್ಯ ಸಚಿವ ಇಂದ್ರಜಿತ್‌ ಸಿಂಗ್‌, ‘ಅತ್ಯಂತ ವಿಳಂಬವಾಗಿ ಅನುಷ್ಠಾನವಾಗುತ್ತಿರುವ 20 (₹150 ಕೋಟಿಗಿಂತ ಹೆಚ್ಚಿನ ಮೊತ್ತದ ಯೋಜನೆಗಳು) ಯೋಜನೆಗಳನ್ನು ಪಟ್ಟಿ ಮಾಡಲಾಗಿದ್ದು, ಬೆಂಗಳೂರು– ಸತ್ಯಮಂಗಲಂ ಯೋಜನೆಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದು ತಿಳಿಸಿದ್ದಾರೆ.

‘1996ರಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. 2002ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು.
₹1,383 ಕೋಟಿ ಮೊತ್ತದ ಯೋಜನೆಯು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಬೆಂಗಳೂರು– ಚಾಮರಾಜನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ (147 ಕಿ.ಮೀ) ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಬಜೆಟ್‌ನಲ್ಲಿ 2013ರಲ್ಲಿ ಘೋಷಿಸಲಾಯಿತು. ಬೆಂಗಳೂರು– ಹೆಜ್ಜಾಲೆ– ಕನಕಪುರ– ಮಳವಳ್ಳಿ– ಕೊಳ್ಳೆಗಾಲ– ಚಾಮರಾಜನಗರ ನಡುವೆ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಯೋಜನಾ ಮೊತ್ತದ ಶೇ50ರಷ್ಟನ್ನು ಭರಿಸಲು ಕರ್ನಾಟಕ ಸರ್ಕಾರ ಒಪ್ಪಿಕೊಂಡಿತು. ಯೋಜನೆಗಾಗಿ 1733 ಎಕರೆ ಜಾಗವನ್ನು ಭೂಸ್ವಾಧೀನ ಮಾಡಬೇಕಿದೆ. ಆ ಬಳಿಕ ಯೋಜನೆಯು ಒಂದು ಹೆಜ್ಜೆ ಮುಂದಕ್ಕೆ ಹೋಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯೇ ನಡೆದಿಲ್ಲ.

‘ಬೆಂಗಳೂರಿನಿಂದ ಮೈಸೂರಿಗೆ ಹೋಗದೆಯೇ ನೇರವಾಗಿ ಚಾಮರಾಜನಗರಕ್ಕೆ ತಲುಪುವ ಪರ್ಯಾಯ ಮಾರ್ಗದ ಯೋಜನೆ ಇದಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಆರ್ಥಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

ದಟ್ಟ ಅರಣ್ಯದಲ್ಲಿ ಈ ಯೋಜನೆ ಹಾದು ಹೋಗುವುದರಿಂದ ಆರಂಭದಲ್ಲಿ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು. ಬಳಿಕ ಯೋಜನೆಯ ಹೆಸರನ್ನು ಬೆಂಗಳೂರು– ಚಾಮರಾಜನಗರ ರೈಲು ಯೋಜನೆ ಎಂದು ಬದಲಿಸಲಾಯಿತು. ರೈಲ್ವೆ ಇಲಾಖೆಯ ಪಿಂಕ್‌ ಪುಸ್ತಕದಲ್ಲಿ ಯೋಜನೆಗೆ ಬಗ್ಗೆ ಹೇಳಲಾಗಿದೆ ಅಷ್ಟೇ. ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಕರ್ನಾಟಕ ಸರ್ಕಾರ ಇಲ್ಲಿಯವರೆಗೆ ಸ್ವಾಧೀನಪಡಿಸಿಲ್ಲ. ಹೀಗಾಗಿ, ಯೋಜನೆಗೆ ಚಾಲನೆಯೇ ಸಿಕ್ಕಿಲ್ಲ. ಭೂಮಿ ಕೊಡದೆ ರೈಲ್ವೆ ಇಲಾಖೆಯವರು ಏನು ಮಾಡಲು ಸಾಧ್ಯ’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ಪ್ರಶ್ನಿಸಿದರು.

ಶೇ 50ರಷ್ಟು ಯೋಜನೆಗಳು ವಿಳಂಬ

ಕೇಂದ್ರ ಸರ್ಕಾರದ ಅನುದಾನದಲ್ಲಿ (ಕೇಂದ್ರ ವಲಯದ ಯೋಜನೆಗಳು) ಅನುಷ್ಠಾನಗೊಳ್ಳುತ್ತಿರುವ 1,568 ಯೋಜನೆಗಳ ಪೈಕಿ 721 ಯೋಜನೆಗಳು ವಿಳಂಬವಾಗಿವೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ (843ರಲ್ಲಿ 302), ರೈಲ್ವೆ ಇಲಾಖೆ (211ರಲ್ಲಿ 127) ಹಾಗೂ ಪೆಟ್ರೋಲಿಯಂ ಇಲಾಖೆಗೆ (139ರಲ್ಲಿ 91) ಸಂಬಂಧಿಸಿದ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.