ADVERTISEMENT

ಭವಾನಿಪುರ ಉಪ ಚುನಾವಣೆ| ಎದುರಾಳಿಗಳೇ ಇಲ್ಲ ಮಮತಾಗೆ

ಭವಾನಿಪುರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 17:17 IST
Last Updated 13 ಸೆಪ್ಟೆಂಬರ್ 2021, 17:17 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ    

ಕೋಲ್ಕತ್ತ : ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಏಕಪಕ್ಷೀಯವಾಗುವ ಸಾಧ್ಯತೆ ಅತ್ಯಧಿಕವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಹೊಸಬರನ್ನು ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್ ಸ್ಪರ್ಧೆಯಿಂದ ದೂರ ಉಳಿದಿದೆ. ಶ್ರೀಜಿಬ್ ವಿಶ್ವಾಸ್ ಅವರನ್ನು ಸಿಪಿಎಂ ಕಣಕ್ಕೆ ಇಳಿಸಿದೆ.

ಟಿಎಂಸಿ ಹೊರತುಪಡಿಸಿ ಬೇರೆ ಯಾವ ಪಕ್ಷವೂ ಈ ಉಪ ಚುನಾವಣೆಯನ್ನು ಗೆಲ್ಲುವ ವಿಶ್ವಾಸದಲ್ಲಿ ಇಲ್ಲ, ಗೆಲ್ಲುವ ಇಚ್ಛೆಯನ್ನೂ ಹೊಂದಿಲ್ಲ. ಮಮತಾ ಬ್ಯಾನರ್ಜಿ ಅವರಿಗೆ ಇದು ಪೈಪೋಟಿಯೇ ಇಲ್ಲದ ಸ್ಪರ್ಧೆಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ ಅವರು, ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಮಮತಾ ಅವರು ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಭವಾನಿಪುರ ಶಾಸಕ ಸೋವನ್‌ದೇವ್ ಚಟ್ಟೋಪಾಧ್ಯಾಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಮಮತಾ ಬ್ಯಾನರ್ಜಿ ಅವರೇ ಇಲ್ಲಿ ಗೆಲ್ಲಲಿದ್ದಾರೆ ಎಂದು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ‘ಇಲ್ಲಿ ದೀದಿ ಅವರೇ ಗೆಲ್ಲುತ್ತಾರೆ. ಆದರೆ ಈ ಗೆಲುವಿನ ಅಂತರ ದಾಖಲೆಮಟ್ಟದ್ದಾಗಿರಬೇಕು ಎಂಬುದು ನಮ್ಮ ಗುರಿ ಹೀಗಾಗಿ ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡಿ, ಮತ ಕೇಳುತ್ತಿದ್ದೇವೆ’ ಎಂದು ಟಿಎಂಸಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭವಾನಿಪುರ ಕ್ಷೇತ್ರದಲ್ಲಿ ಏಳು ವಾರ್ಡ್‌ಗಳಿವೆ. ಅವುಗಳಲ್ಲಿ ಐದು ವಾರ್ಡ್‌ಗಳಲ್ಲಿ ಟಿಎಂಸಿ ಪ್ರಾಬಲ್ಯವಿದೆ. ಮಮತಾ ಬ್ಯಾನರ್ಜಿ ಅವರ ಸ್ಪರ್ಧೆಯನ್ನು ಇಲ್ಲಿನ ಮತದಾರರೇ ಸಂಭ್ರಮಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಮತದಾರರು ಸಹ, ಭವಾನಿಪುರಕ್ಕೆ ಅವಳ ಮಗಳು ಹಿಂತಿರುಗಿದ್ದಾಳೆ ಎಂದು ಘೋಷಣೆ ಕೂಗುತ್ತಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ ಈ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರಲು ನಿರ್ಧರಿಸಿತು.

ಮತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ

ಬಿಜೆಪಿ ಅಭ್ಯರ್ಥಿ, ವೃತ್ತಿಯಲ್ಲಿ ವಕೀಲರಾದ ಪ್ರಿಯಾಂಕಾ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸರಣಿ ಪಿಐಎಲ್‌ಗಳನ್ನು ಸಲ್ಲಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು. ಈ ಕಾರಣದಿಂದಲೇ 2021ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು.

ಆ ಚುನಾವಣೆಯಲ್ಲಿ ಪ್ರಿಯಾಂಕಾ ಸಹ ಸ್ಪರ್ಧಿಸಿದ್ದರು. ಆದರೆ ಭಾರಿ ಅಂತರದಿಂದ ಸೋತಿದ್ದರು. ಪ್ರಿಯಾಂಕಾ ಅವರು ತಮ್ಮ ನಾಮಪತ್ರವನ್ನು ಈಗಾಗಲೇ ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ವಿರುದ್ಧ ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಪ್ರಿಯಾಂಕಾ ಪರವಾಗಿ ಪ್ರಚಾರ ನಡೆಸಿದ್ದಾರೆ.

ಆದರೆ ಈ ಸ್ಪರ್ಧೆಯಲ್ಲಿ ಪಕ್ಷಕ್ಕೆ ಗೆಲ್ಲುವ ವಿಶ್ವಾಸವಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ 30ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಅಷ್ಟು ಮತಗಳನ್ನು ಈ ಉಪಚುನಾವಣೆಯಲ್ಲಿ ಉಳಿಸಿಕೊಳ್ಳುವುದರತ್ತ ಪಕ್ಷವು ಗಮನ ಹರಿಸುತ್ತಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.