ADVERTISEMENT

ಪಂಜಾಬ್‌‌ನ ನಿಯೋಜಿತ ಮುಖ್ಯಮಂತ್ರಿ ಭಗವಂತ ಮಾನ್ ಮಾತ್ರ ಬುಧವಾರ ಪ್ರಮಾಣವಚನ

ಐಎಎನ್ಎಸ್
Published 13 ಮಾರ್ಚ್ 2022, 10:13 IST
Last Updated 13 ಮಾರ್ಚ್ 2022, 10:13 IST
ಅರವಿಂದ ಕೇಜ್ರಿವಾಲ್ ಅವರೊಂದಿಗೆ ಭಗವಂತ ಮಾನ್
ಅರವಿಂದ ಕೇಜ್ರಿವಾಲ್ ಅವರೊಂದಿಗೆ ಭಗವಂತ ಮಾನ್   

ಚಂಡೀಗಡ: ಪಂಜಾಬ್‌ನ ನಿಯೋಜಿತ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರು ಮಾತ್ರ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರು ಬುಧವಾರ (ಮಾ. 16) ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

17 ಸದಸ್ಯರನ್ನು ಒಳಗೊಂಡಿರುವ ಅವರ ಸಂಪುಟದ ಪ್ರಮಾಣ ವಚನ ಸಮಾರಂಭವು ನಂತರ ನಡೆಯಲಿದೆ ಎಂದು ಪಕ್ಷದ ಮೂಲವೊಂದು ಐಎಎನ್‌ಎಸ್‌ಗೆ ತಿಳಿಸಿದೆ.

ADVERTISEMENT

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 2017ರಲ್ಲಿ ಕೇವಲ 20 ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

ಇದಕ್ಕೂ ಮುನ್ನ ಮಾನ್ ಅವರು ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮವಾದ ಖಟಕಡಕಲಾನ್‌ನಲ್ಲಿ ಮಾರ್ಚ್ 16 ರಂದು ಮಧ್ಯಾಹ್ನ 12.30ಕ್ಕೆ ಪಂಜಾಬ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಭಗವಂತ್ ಮಾನ್‌ ತಿಳಿಸಿದ್ದಾರೆ.

ಈ ಬಗ್ಗೆ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 'ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸ್ಥಳ ಮತ್ತು ಸಮಯದ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಖಟಕಡಕಲಾನ್‌ಗೆ ಬರಲು ಪಂಜಾಬ್‌ನ ಎಲ್ಲ ಜನರನ್ನು ಆಹ್ವಾನಿಸುತ್ತೇನೆ. 16ರಂದು ನಾವು ಮತ್ತು ನಮ್ಮ ಸಚಿವರಲ್ಲದೆ ಇಡೀ ಪಂಜಾಬ್ ಜನರು ಪಂಜಾಬ್‌ನ ಸಮೃದ್ಧಿಗಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾವೆಲ್ಲ ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೈಜೋಡಿಸುತ್ತೇವೆ' ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.