ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮುಷ್ಕರ ನಿರತರ ಮೇಲೆ ಮಾರ್ಷಲ್‌ಗಳಿಂದ ಲಾಠಿ ಪ್ರಹಾರ
ಎಕ್ಸ್ ಚಿತ್ರ
ಬೆಂಗಳೂರು: ಉದ್ಯಮಿಗಳ ಪರವಾಗಿರುವ ಸರ್ಕಾರದ ನೀತಿಗಳಿಂದ ರೈತರು, ಬಡವರು ಹಾಗೂ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‌ಗೆ ಕರೆ ನೀಡಿದೆ.
ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮೀಣ ಮತ್ತು ಕೃಷಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 25 ಕೋಟಿ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಳ್ಳುವ ಅಂದಾಜನ್ನು ಸಂಘಟನೆಗಳು ವ್ಯಕ್ತಪಡಿಸಿವೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತರಾದವರನ್ನೇ ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳುತ್ತಿರುವುದರಿಂದ, ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ರೈಲ್ವೆ, ಎನ್‌ಎಂಡಿಸಿ, ಉಕ್ಕು ಕೈಗಾರಿಕೆ, ಶಿಕ್ಷಣ ಇಲಾಖೆಗಳಲ್ಲಿ ಈ ಪದ್ಧತಿ ನಡೆದಿದೆ. ದೇಶದಲ್ಲಿ 35ರೊಳಗಿನ ವಯೋಮಾನದವರ ಸಂಖ್ಯೆ ಶೇ 65ರಷ್ಟಿದೆ. ಸರ್ಕಾರದ ನೀತಿಯಿಂದ ಇವರಿಗೆ ತೀವ್ರ ಅನ್ಯಾಯವಾಗುತ್ತಿದೆ. ಅದರಲ್ಲೂ 20ರಿಂದ 25ರ ವಯೋಮಾನದವರಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಹೆಚ್ಚಳವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಮುಷ್ಕರದಲ್ಲಿ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯುಸಿ, ಎಚ್ಎಂಎಸ್, ಎಸ್‌ಇಡಬ್ಲೂಎ, ಎಐಯುಟಿಯುಸಿ, ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯುಸಿ ಮತ್ತು ಟಿಯುಸಿಸಿ ಸಂಘಟನೆಗಳು ಪಾಲ್ಗೊಂಡಿವೆ.
ಪಶ್ಚಿಮ ಬಂಗಾಳದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಕಾರ್ಮಿಕರು, ರೈಲು ತಡೆ ನಡೆಸಿದ್ದಾರೆ. ಕಾರ್ಪೊರೇಟ್ ಪರ ನೀತಿ ವಿರೋಧಿಸಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾದವ್‌ಪುರದಲ್ಲಿ ಬಸ್ಸುಗಳು ಎಂದಿನಂತೆಯೇ ಸಂಚಾರ ನಡೆಸಿದವು. ಮುಂಜಾಗ್ರತಾ ಕ್ರಮವಾಗಿ ಬಸ್ ಚಾಲಕರು ಹೆಲ್ಮೆಟ್ ಧರಿಸಿದ್ದು ಕಂಡುಬಂತು
ಉದ್ಯೋಗ ಅವಧಿ ಹೆಚ್ಚಳ ಸೇರಿದಂತೆ ಹಲವು ಕಾರ್ಮಿಕ ವಿರೋಧಿ ನೀತಿಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಜತೆಗೆ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವ ಸಂಚು ನಡೆಸುತ್ತಿದೆ. ಸಂಘಟನೆ ಕಟ್ಟುವುದು ಅಥವಾ ಮುಷ್ಕರ ನಡೆಸುವುದೂ ಕಷ್ಟಕರ ಎಂಬಂತ ವಾತಾವರಣವನ್ನು ಕೇಂದ್ರ ಸೃಷ್ಟಿಸುತ್ತಿದೆ.
ಸರ್ಕಾರಿಕ ನೌಕರಿ ಹೆಚ್ಚಿಸಬೇಕು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚು ಮಾನವ ದಿನಗಳನ್ನು ಸೃಜಿಸಬೇಕು. ಇಂಥದ್ದೇ ಮಾದರಿಯ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಲ್ಲೂ ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನೂ ಒಳಗೊಂಡು ಒಟ್ಟು 17 ಅಂಶಗಳ ಪಟ್ಟಿಯನ್ನು ಕಾರ್ಮಿಕ ಸಂಘಟನೆಗಳು ಕಾರ್ಮಿಕ ಸಚಿವರಿಗೆ ಸಲ್ಲಿಸಿವೆ. ಆದರೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಆರೋಪಿಸಲಾಗಿದೆ
ಬ್ಯಾಂಕುಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿವೆ.
ಷೇರು ಮಾರುಕಟ್ಟೆಯೂ ಎಂದಿನಂತೆಯೇ ಕಾರ್ಯ ನಿರ್ವಹಿಸಿವೆ
ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ರಜೆ ಘೋಷಣೆಯಾಗಿಲ್ಲ
ದೇಶದ ಹಲವು ಭಾಗಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥ ಉಂಟಾಗಿತ್ತು. ವಿದ್ಯಾರ್ಥಿಗಳು, ನೌಕರರು ಸಂಕಷ್ಟ ಎದುರಿಸಿದರು.
ಇದೇ ವಿಷಯವಾಗಿ ಕಾರ್ಮಿಕ ಸಂಘಟನೆಗಳು 2024ರ ಫೆ. 16ರಂದು, 2022ರ ಮಾರ್ಚ್ 28ರಿಂದ 29ರವರೆಗೆ ಮತ್ತು 2020ರ ನ. 26ರಂದು ಬಂದ್‌ಗೆ ಕರೆ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.