ADVERTISEMENT

ಭಾರತ್‌ ಜೋಡೊ | ಹಿಂಸೆ ಅಂತ್ಯವೇ ಯಾತ್ರೆ ಗುರಿ: ರಾಹುಲ್ ಗಾಂಧಿ

‘ಭಾರತ್‌ ಜೋಡೊ’ ಶ್ರೀನಗರದಲ್ಲಿ ಸಮಾರೋಪ

ಪಿಟಿಐ
Published 30 ಜನವರಿ 2023, 19:31 IST
Last Updated 30 ಜನವರಿ 2023, 19:31 IST
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸೋಮವಾರ ಶ್ರೀನಗರದಲ್ಲಿ ನಡೆದ ‘ಭಾರತ್ ಜೋಡೊ ಯಾತ್ರೆ’ಯ ಸಮಾರೋಪದಲ್ಲಿ ಭಾಗಿಯಾಗಿದ್ದರು –ಎಎಫ್‌ಪಿ ಚಿತ್ರ
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸೋಮವಾರ ಶ್ರೀನಗರದಲ್ಲಿ ನಡೆದ ‘ಭಾರತ್ ಜೋಡೊ ಯಾತ್ರೆ’ಯ ಸಮಾರೋಪದಲ್ಲಿ ಭಾಗಿಯಾಗಿದ್ದರು –ಎಎಫ್‌ಪಿ ಚಿತ್ರ   

ನವದೆಹಲಿ: ‘ದೇಶದಲ್ಲಿ ಈಗ ಹಿಂಸೆ ನಡೆಸಲು ಹೊರಟಿರುವವರಿಗೆ ಎಂದೂ ಹಿಂಸೆಯ ಅನುಭವವಾಗಿಲ್ಲ. ಹಿಂಸೆಯ ಅನುಭವವಾಗದೇ ಇರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಆರ್‌ಎಸ್‌ಎಸ್‌ನವರಿಗೆ ಹಿಂಸೆ ಏನು ಎಂಬುದು ಅರ್ಥವಾಗುವುದಿಲ್ಲ. ಹಿಂಸಿಸಬೇಕು ಎಂಬ ಮನಃಸ್ಥಿತಿ ಕೊನೆಗಾಣಿಸಬೇಕು ಎಂಬುದೇ ಭಾರತ್ ಜೋಡೊ ಯಾತ್ರೆಯ ಉದ್ದೇಶ’– 145 ದಿನಗಳ ಭಾರತ್ ಜೋಡೊ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಡಿದ ಮಾತುಗಳಿವು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 14 ರಾಜ್ಯಗಳ ಮೂಲಕ 4,000 ಕೀ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಿದ ಈ ಪಾದಯಾತ್ರೆಯು ಶ್ರೀನಗರದಲ್ಲಿ ಸೋಮವಾರ ಕೊನೆಯಾಯಿತು. ಯಾತ್ರೆಯ ಶಿಬಿರದಲ್ಲಿ ಧ್ವಜಾರೋಹಣದ ನಂತರ, ಶೇರ್–ಎ–ಕಾಶ್ಮೀರ್ ಕ್ರೀಡಾಂಗಣದಲ್ಲಿ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ನಾಯಕರಾದ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್‌, ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಸುರಿಯುತ್ತಿದ್ದ ಹಿಮದ ಮಧ್ಯೆಯೇ ತೆರೆದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.

‘ನನಗಾಗಿ ಮತ್ತು ಕಾಂಗ್ರೆಸ್‌ಗಾಗಿ ನಾನು ಭಾರತ್‌ ಜೋಡೊ ಯಾತ್ರೆಯನ್ನು ಮಾಡಲಿಲ್ಲ. ಬದಲಿಗೆ ದೇಶದಜನರಿಗಾಗಿ ಈ ಯಾತ್ರೆ ಮಾಡಿದೆ. ದೇಶದ ನೆಲೆಗಟ್ಟನ್ನು ಧ್ವಂಸ ಮಾಡುವಂತಹ ಸಿದ್ಧಾಂತದ ವಿರುದ್ಧ ನಿಲ್ಲಬೇಕು ಎಂಬುದೇ ನಮ್ಮ ಗುರಿ’ ಎಂದು ರಾಹುಲ್ ಹೇಳಿದರು.

ADVERTISEMENT

ಹಿಂಸೆಯಿಂದ ಆಗುವ ನೋವು ಎಂಥದ್ದು ಎಂಬುದು ಕಾಶ್ಮೀರದ ಜನರಿಗೆ, ಸೈನಿಕರ ಕುಟುಂಬದವರಿಗೆ, ನನಗೆ ಮತ್ತು ನನ್ನ ತಂಗಿಗೆ ಗೊತ್ತಿದೆ. ಫೋನ್‌ ಕರೆ ಎಂಬುದನ್ನು ನಾವು ಸಾಮಾನ್ಯವೆಂಬಂತೆ ನೋಡಲು ಸಾಧ್ಯವೇ ಇಲ್ಲ. ಅದನ್ನು ನಾವು ಬೇರೆ ರೀತಿಯಲ್ಲೇ ನೋಡುತ್ತೇವೆ. ನಾನು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ, ತರಗತಿಯಲ್ಲಿ ಪಾಠ ಕೇಳುತ್ತಿದ್ದೆ. ಪ್ರಾಂಶುಪಾಲರ ಕಚೇರಿಗೆ ನನ್ನನ್ನು ಕರೆಸಿಕೊಳ್ಳಲಾಯಿತು. ಮನೆಯಿಂದ ನನಗೆ ಫೋನ್‌ ಕರೆ ಬಂದಿತ್ತು. ಫೋನ್‌ ಕಿವಿಗೆ ಇಟ್ಟೊಡನೆ ಮನೆಕೆಲಸದ ಮಹಿಳೆ ಅಳುತ್ತಿದ್ದದ್ದು ಕೇಳಿಸಿತು. ‘ಅಜ್ಜಿಗೆ ಗುಂಡು ಹೊಡೆದಿದ್ದಾರೆ’ ಎಂದು ಅರಚುತ್ತಿದ್ದರು. ಅದಾಗಿ ಐದಾರು ವರ್ಷಗಳಲ್ಲಿ ನಾನು ಅಮೆರಿಕದಲ್ಲಿದ್ದೆ. ಆಗಲೂ ನನಗೆ ಅಂತಹದ್ದೇ ಕರೆ ಬಂತು, ನನ್ನ ಅಪ್ಪನ ಹತ್ಯೆಯ ಕೆಟ್ಟಸುದ್ದಿ ಅದಾಗಿತ್ತು. ಆ ನೋವನ್ನು ಅನುಭವಿಸಿದವರಿಗೆ
ಮಾತ್ರವೇ ಅದು ಗೊತ್ತು, ನನ್ನ ಹೃದಯದಲ್ಲಿ ಅಂತಹ ನೋವು ಮಡುಗಟ್ಟಿದೆ. ನನ್ನ ತಂಗಿಗೆ ಆ ನೋವು ಗೊತ್ತಿದೆ. ಕಾಶ್ಮೀರದ ಜನರಿಗೆ, ಸೈನಿಕರ ಮನೆಯವರಿಗೆ ಅಂತಹ ಕರೆ ಬಂದಾಗ ಭಯವಾಗುತ್ತದೆ. ತಮ್ಮವರು ಹಿಂಸೆಗೆ ಬಲಿಯಾದಾಗ ಇವರೆಲ್ಲರೂ ನೋವುಂಡಿದ್ದಾರೆ. ಹಿಂಸೆಗೆ ಕುಮ್ಮಕ್ಕು ನೀಡುವಂತಹ ಮೋದಿ, ಶಾ, ಡೊಭಾಲ್ ಮತ್ತು ಆರ್‌ಎಸ್‌ಎಸ್‌ನವರಿಗೆ ಈ ನೋವು ಅರ್ಥವಾಗುವುದಿಲ್ಲ. ದೇಶದಲ್ಲಿ ಮುಂದೊಂದು ದಿನ ಯಾರಿಗೂ ಅಂತಹ ಕರೆ ಬರಬಾರದು ಎಂಬುದೇ ಈ ಯಾತ್ರೆಯ ಉದ್ದೇಶ’ ಎಂದು ರಾಹುಲ್ ಹೇಳಿದರು.

ನನ್ನ ಮನೆ ಕಾಶ್ಮೀರಕ್ಕೆ ನಾನು ಬಂದಿದ್ದೇನೆ: ರಾಹುಲ್‌

‘ನನ್ನ ಪೂರ್ವಜರು ಕಾಶ್ಮೀರದಿಂದ ದಕ್ಷಿಣದ ಅಲಹಾಬಾದ್‌ನತ್ತ ಹೋಗಿದ್ದರು. ಈಗ ಇಲ್ಲಿಗೆ ಯಾತ್ರೆ ನಡೆಸುವಾಗ, ನಾನು ನನ್ನ ಮನೆಗೆ ವಾಪಸಾಗುತ್ತಿದ್ದೇನೆ ಎಂದು ಅನಿಸುತ್ತಿದೆ’ ಎಂದು ರಾಹುಲ್ ಹೇಳಿದರು.

‘ನಮ್ಮ ಸುತ್ತ ನಾವು ಕಟ್ಟಿಕೊಂಡಿರುವ ಕೋಟೆಯನ್ನು ನಾವೇ ಒಡೆಯಬೇಕಿದೆ. ಆ ಮೂಲಕ ಶೂನ್ಯವನ್ನು ಸಾಧಿಸಬೇಕು. ಹಿಂದೂ ಧರ್ಮದಲ್ಲಿ ಇದನ್ನು ಶೂನ್ಯ ಎನ್ನುತ್ತೇವೆ. ಇಸ್ಲಾಂನಲ್ಲಿ ಇದನ್ನೇ ಫನಾ ಎನ್ನುತ್ತಾರೆ. ಈ ವಿಚಾರಧಾರೆಗಳನ್ನು ಒಟ್ಟಿಗೇ ಕೊಂಡೊಯ್ಯುವುದೇ ಕಾಶ್ಮೀರಿಯತೆ. ಗಾಂಧೀಜಿ ಇದನ್ನೇ ವೈಷ್ಣವಜನತೋ ಎಂದರು, ಅಸ್ಸಾಂನಲ್ಲಿ ಶಂಕರ್‌ದೇವ್ ಇದನ್ನೇ ಹೇಳಿದರು. ಕರ್ನಾಟಕದಲ್ಲಿ ಬಸವಣ್ಣ ಇದನ್ನೇ ಪ್ರತಿಪಾದಿಸಿದರು. ತಮಿಳುನಾಡಿನಲ್ಲಿ ತಿರುವಳ್ಳುವರ್, ಕೇರಳದಲ್ಲಿ ನಾರಾಯಣಗುರು, ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ ಇದನ್ನೇ ಹೇಳಿದರು’ ಎಂದು ರಾಹುಲ್ ಹೇಳಿದರು.

ರಾಜಕೀಯ ಪ್ರೇರಿತ: ಬಿಜೆಪಿ

‘ಇದು (‘ಜೋಡೊ ಯಾತ್ರೆ’) ರಾಜಕೀಯ ಪ್ರೇರಿತ. ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕೇರಳದ ಬೀದಿಗಳಲ್ಲಿ ದನದ ಮಾಂಸ ತಿಂದು ಪಾರ್ಟಿ ಮಾಡಿದ್ದಾರೆ. ಕ್ರೈಸ್ತ ಧರ್ಮಗುರು ಜಾರ್ಜ್ ಪೊನ್ನಯ್ಯ ಅವರು ಭಾರತವನ್ನು ಅಶುದ್ಧ ಎಂದು ಕರೆದಿದ್ದಾರೆ’ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಹುಲ್‌ ಜೊತೆಗೆ ವಿವಿಧ ಭಾಗಗಳಲ್ಲಿ ಹೆಜ್ಜೆ ಹಾಕಿದ ಹಲವು ವ್ಯಕ್ತಿಗಳ ವಿಶ್ವಾಸಾರ್ಹತೆಯನ್ನು ಸುಧಾಂಶು ಪ್ರಶ್ನಿಸಿದ್ದಾರೆ. ‘ತುಕ್ಡೆ ತುಕ್ಡೆ ಗ್ಯಾಂಗ್‌ನ ಭಾಗವಾಗಿದ್ದ ಕನ್ಹಯ್ಯ ಕುಮಾರ್‌, ನಿರ್ದಿಷ್ಟ ದಾಳಿಯನ್ನು ಪ್ರಶ್ನಿಸಿದ ದಿಗ್ವಿಜಯ್‌ ಸಿಂಗ್‌ ಅಂಥವರು, ದ್ವೇಷ ಸಾಧಕರು ರಾಹುಲ್‌ ಜೊತೆಗಿದ್ದರು’ ಎಂದಿದ್ದಾರೆ.

ಯಾತ್ರೆಯಲ್ಲಿ ಏನೇನು?

* 12 ಸಾರ್ವಜನಿಕ ಸಭೆಗಳು

* 100 ಬೀದಿ ಬದಿ ಸಭೆಗಳು

* 13 ಮಾಧ್ಯಮ ಗೋಷ್ಠಿಗಳು

* 100 ಸಂವಾದಗಳು

* 275 ನಡಿಗೆ ಜೊತೆ ಸಂವಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.