ADVERTISEMENT

ಭಾರತ್ ಜೋಡೊ ಯಾತ್ರೆ ‘ಮನ್‌ ಕೀ ಬಾತ್‌’ ಅಲ್ಲ’: ಕಾಂಗ್ರೆಸ್‌

ಪ್ರಧಾನಿ ಮೋದಿಯವರ ತಿಂಗಳ ರೇಡಿಯೊ ಕಾರ್ಯಕ್ರಮಕ್ಕೆ ಲೇವಡಿ

ಪಿಟಿಐ
Published 5 ಸೆಪ್ಟೆಂಬರ್ 2022, 14:19 IST
Last Updated 5 ಸೆಪ್ಟೆಂಬರ್ 2022, 14:19 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ:ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಂಡಿರುವ ಪಕ್ಷದ ‘ಭಾರತ್ ಜೋಡೊ ಯಾತ್ರೆ’ಯುಯಾವುದೇ ರೀತಿಯಲ್ಲೂ ‘ಮನ್ ಕೀ ಬಾತ್’ನಂತಲ್ಲ. ಜನರ ಬೇಡಿಕೆಗಳು ದೆಹಲಿ ತಲುಪುವುದನ್ನು ಖಾತ್ರಿಪಡಿಸುವ ಉದ್ದೇಶ ಈ ಯಾತ್ರೆಯದ್ದು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಬುಧವಾರದಿಂದ (ಸೆ.7) ಆರಂಭವಾಗಲಿರುವ ಯಾತ್ರೆಯ ಗೀತೆಯನ್ನು ಪಕ್ಷದ ನಾಯಕರು ಬಿಡುಗಡೆ ಮಾಡಿದ್ದು, ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ‘ಭಾರತ ಯಾತ್ರಿ’ಗಳ ಜತೆಗೆ 3,570 ಕಿ. ಮೀ ದೂರದ ಯಾತ್ರೆ ಆರಂಭಿಸಲಿದ್ದಾರೆ. ಸ್ವತಂತ್ರ ಭಾರತದಲ್ಲಿ ಕೈಗೊಳ್ಳುತ್ತಿರುವ ಈ ಅಭೂತಪೂರ್ವ ಯಾತ್ರೆಯನ್ನು ಸಾಮೂಹಿಕ ಸಂಪರ್ಕ ಕಾರ್ಯಕ್ರಮವೆಂದು ಕಾಂಗ್ರೆಸ್‌ ವ್ಯಾಖ್ಯಾನಿಸಿದೆ.

ಯಾತ್ರೆಯ ಪ್ರಧಾನ ಗೀತೆ ಬಿಡುಗಡೆ ಮಾಡಿದ ನಂತರ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಭಾರಿ ವಕ್ತಾರ ಜೈರಾಮ್‌ ರಮೇಶ್‌, ಈ ಗೀತೆಯಲ್ಲಿರುವ ‘ಏಕ್ ತೇರಾ ಕದಂ, ಏಕ್ ಮೇರಾ ಕದಂ, ಮಿಲ್ ಜಾಯೇ, ಜುದ್‌ ಜಾಯೇ ಅಪ್ನಾ ವತನ್‌’, ಯಾತ್ರೆಯ ಘೋಷ ವಾಕ್ಯ ‘ಮಿಲೇ ಕದಮ್‌, ಜುದೇ ವತನ್‌’ ಸಾಲುಗಳು ಯಾತ್ರೆಯ ಉದ್ದೇಶವನ್ನು ಸಾರುತ್ತವೆ ಎಂದು ಹೇಳಿದರು.

ADVERTISEMENT

ಯಾತ್ರೆಯ ಉದ್ದೇಶ ಜನರ ಬೇಡಿಕೆಗಳು ಮತ್ತು ಕಳಕಳಿ ದೆಹಲಿಗೆ ತಲುಪುವುದನ್ನು ಖಾತ್ರಿಪಡಿಸುವುದಾಗಿದೆ ಎಂದು ಜೈರಾಮ್‌ ರಮೇಶ್‌ ಅವರು, ಪ್ರತಿ ತಿಂಗಳು ರೇಡಿಯೊದಲ್ಲಿ ಪ್ರಸಾರವಾಗುವ ಪ್ರಧಾನಿಯವರ ‘ಮನ್‌ ಕೀ ಬಾತ್‌’ ಕಾರ್ಯಕ್ರಮವನ್ನು ಪರೋಕ್ಷವಾಗಿ ಲೇವಡಿ ಮಾಡಿದರು.

‘ಈ ಯಾತ್ರೆಯುಸುದೀರ್ಘ ಭಾಷಣಗಳು, ನಾಟಕೀಯತೆ, ಟೆಲಿಪ್ರಾಮ್ಟರ್‌ನಿಂದ ಕೂಡಿರುವುದಿಲ್ಲ. ನಾವು ಜನರ ಕಳಕಳಿ –ಬೇಡಿಕೆಗಳನ್ನು ಆಲಿಸುತ್ತೇವೆ. ರಾಹುಲ್ ಗಾಂಧಿ ಸೇರಿ ಭಾರತ ಯಾತ್ರಿಗಳು ಯಾತ್ರೆಯ ಉದ್ದಕ್ಕೂ ಪಾದಯಾತ್ರೆ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

‘ದೇಶವು ವಿಭಜನೆಯತ್ತ ಸಾಗುತ್ತಿದೆ. ಇದಕ್ಕೆಮೊದಲ ಕಾರಣವೆಂದರೆ ಆರ್ಥಿಕ ಅಸಮಾನತೆಗಳು, ಎರಡನೆಯದು; ಸಾಮಾಜಿಕ ಧ್ರುವೀಕರಣ ಮತ್ತು ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು. ಈಗ ದೇಶಕ್ಕೆ ಅತ್ಯವಶ್ಯವಿರುವುದು ಭಾರತ್‌ ಜೋಡೊ ಯಾತ್ರೆ’ ಎಂದರು.

ಬಿಜೆಪಿ ಟೀಕೆಗೆ ಕಾಂಗ್ರೆಸ್‌ ಪ್ರತ್ಯುತ್ತರ: ‘ನಮ್ಮದು ಪ್ರಜಾಸತ್ತಾತ್ಮಕ ಪಕ್ಷ. ಪಕ್ಷದಲ್ಲಿ ಒಗ್ಗಟ್ಟು ಇದೆ. ಪ್ರತಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು ಮತ್ತು ಅವರ ಅಭಿಪ್ರಾಯಕ್ಕೆ ಮನ್ನಣೆ ಇದೆ’ ಎಂದು ಕಾಂಗ್ರೆಸ್‌, ಬಿಜೆಪಿ ನಾಯಕರ ಟೀಕೆಗೆ ಪ್ರತ್ಯುತ್ತರ ನೀಡಿದೆ.

ಕಾಂಗ್ರೆಸ್‌ನ ಈ ಯಾತ್ರೆಗೆ ಬಿಜೆಪಿ ನಾಯಕರ ಕಟು ಟೀಕೆ ಮತ್ತು ಇತ್ತೀಚೆಗಷ್ಟೇ ಪಕ್ಷ ತೊರೆಯುವುದಕ್ಕೂ ಮುನ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ‘ಭಾರತ್ ಜೋಡೊ’ ಮೊದಲು ಪಕ್ಷವು ‘ಕಾಂಗ್ರೆಸ್ ಜೊಡೊ’ ಕೈಗೆತ್ತಿಕೊಳ್ಳಬೇಕೆಂದು ಮಾಡಿದ್ದ ಟೀಕೆಗೆ ಜೈರಾಮ್‌ ರಮೇಶ್‌ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.