ADVERTISEMENT

ಭಾರತ್‌ ಜೋಡೊ ಯಾತ್ರೆ: ರಾಹುಲ್‌ ಸ್ವಾಗತಿಸಿದ ಲಿಜೋ, ರೆಕ್ಸಿ!

ಇಂದೋರ್‌ನಿಂದ ಬಂದಿದ್ದ ಆರು ವರ್ಷದ ಲ್ಯಾಬ್ರೆಡಾರ್‌ ನಾಯಿಗಳು

ಪಿಟಿಐ
Published 2 ಡಿಸೆಂಬರ್ 2022, 19:30 IST
Last Updated 2 ಡಿಸೆಂಬರ್ 2022, 19:30 IST
ತನೋಡಿಯಾದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲ್ಯಾಬ್ರೆಡಾರ್‌ ನಾಯಿ ಹೂಗುಚ್ಛ ನೀಡಿ ಸ್ವಾಗತಿಸಿದ ಪರಿ –ಪಿಟಿಐ ಚಿತ್ರ
ತನೋಡಿಯಾದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲ್ಯಾಬ್ರೆಡಾರ್‌ ನಾಯಿ ಹೂಗುಚ್ಛ ನೀಡಿ ಸ್ವಾಗತಿಸಿದ ಪರಿ –ಪಿಟಿಐ ಚಿತ್ರ   

ತನೋಡಿಯಾ: ಆಗರ್‌ ಮಾಲವಾ ಜಿಲ್ಲೆ ಕಡೆಗೆ ಸಾಗುತ್ತಿದ್ದ ‘ಭಾರತ್‌ ಜೋಡೊ ಯಾತ್ರೆ’ಯುತನೋಡಿಯಾದಲ್ಲಿ ಚಹಾ ವಿರಾಮಕ್ಕಾಗಿ ನಿಂತಿತ್ತು. ವಿರಾಮ ಮುಗಿಸಿ ಮತ್ತೆ ಯಾತ್ರೆ ಪ್ರಾರಂಭಗೊಳ್ಳುತ್ತಿದ್ದಂತೆಯೇ ಲಿಜೋ ಮತ್ತು ರೆಕ್ಸಿ ಎಂಬಆರು ವರ್ಷದ ಲ್ಯಾಬ್ರೆಡಾರ್‌ ನಾಯಿಗಳು ಬಾಯಲ್ಲಿ ಹೂಗುಚ್ಛದ ಬುಟ್ಟಿಗಳನ್ನು ಹಿಡಿದುರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಿದವು.

‘ಚಲೇ ಕದಂ, ಜುಡೇ ವತನ್‌’ (ನಡಿಗೆ ಸಾಗಲಿ, ದೇಶ ಒಗ್ಗೂಡಲಿ), ‘ನಫರತ್‌ ಚೋಡೊ, ಭಾರತ್‌ ಜೋಡೊ’ (ದ್ವೇಷ ಬಿಡಿ, ಭಾರತ ಒಗ್ಗೂಡಿಸಿ) ಎಂದು ಟಿಪ್ಪಣಿಯೂ ಇದ್ದ ಹೂಗುಚ್ಛದ ಬುಟ್ಟಿಯನ್ನು ಹಿಡಿದು ನಿಂತಿದ್ದವು. ಲಿಜೋ ಮತ್ತು ರೆಕ್ಸಿಯಿಂದ ಹೂಗುಚ್ಛ ಸ್ವೀಕರಿಸಿದ ರಾಹುಲ್‌, ಅವುಗಳೊಂದಿಗೆ ಫೋಟೊವನ್ನು ತೆಗೆಸಿಕೊಂಡರು.

ಲಿಜೋ ಮತ್ತು ರೆಕ್ಸಿ ತಮ್ಮ ಮಾಲೀಕ ಸರ್ವಮಿತ್ರ ನಾಚನ್‌ ಅವರೊಂದಿಗೆ ಇಂದೋರ್‌ನಿಂದ ತನೋಡಿಯಾಗೆ ಬಂದಿದ್ದವು.

ADVERTISEMENT

ಝಾಲರಾ: ಮಧ್ಯಪ್ರದೇಶದಲ್ಲಿ ಭಾರತ್‌ ಜೋಡೊ ಯಾತ್ರೆಯು 10ನೇ ದಿನಕ್ಕೆ ಕಾಲಿಟ್ಟಿತು. ಯಾತ್ರೆಯು ಶುಕ್ರವಾರ ಸಂಜೆಯ ಹೊತ್ತಿಗೆ ಆಗರ್‌ ಮಾಲವಾ ಜಿಲ್ಲೆ ತಲು‍ಪಿತು.

‘ಮಹಿಳೆ ಜೊತೆ ನಡಿಗೆ’ ಶುಕ್ರವಾರರ ಯಾತ್ರೆಯ ವಿಷಯವಾಗಿತ್ತು. ಕಾಂಗ್ರೆಸ್‌ನ ಹಲವಾರು ಮಹಿಳಾ ಮುಖಂಡರು, ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಶೋಭಾ ಒಝಾ ಮತ್ತು ಮಾಜಿ ಸಂಸದೆ ಮೀನಾಕ್ಷಿ ನಟರಾಜನ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

‘ಚುನಾವಣೆ ಬಂದ ಕೂಡಲೇ ಏಕರೂಪ ನಾಗರಿಕ ಸಂಹಿತೆ ಜಪ’
ಸುಮ್ರಾ ಖೇದಿ (ಮಧ್ಯಪ್ರದೇಶ):
‘ಚುನಾವಣೆ ಬಂದ ಕೂಡಲೇ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯ ಚಪ ಮಾಡುತ್ತದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದರು.

‘ಭಾರತ್‌ ಜೋಡೊ ಯಾತ್ರೆ’ ಆಗರ್‌ ಮಾಲವಾ ಜಿಲ್ಲೆಯ ಸುಮ್ರಾ ಖೇದಿಯಲ್ಲಿ ಸಾಗುತ್ತಿದ್ದ ವೇಳೆ ಅವರು ಮಾತನಾಡಿದರು. ‘ಈ ಬಾರಿ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಇದೆ. ಆದ್ದರಿಂದ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನು ಎತ್ತಿ ಆಡುತ್ತಿದೆ’ ಎಂದರು.

ಸಂಘಟನೆಯ ತತ್ವದಡಿ ಪರಿಹಾರ: ಡಿಸೆಂಬರ್‌ 4ಕ್ಕೆ ಯಾತ್ರೆಯು ರಾಜಸ್ಥಾನ ತಲುಪಲಿದೆ. ರಾಜ್ಯದಲ್ಲಿ ಎದ್ದಿರುವ ನಾಯಕತ್ವದ ಬಿಕ್ಕಟ್ಟಿನ ಕುರಿತು ಪತ್ರಕರ್ತರು ಹೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್‌, ‘ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದಲ್ಲಿನ ನಾಯಕತ್ವದ ಬಿಕ್ಕಟ್ಟನ್ನು ಸಂಘಟನೆಯ ತತ್ವದ ನೆಲೆಯಲ್ಲಿ ಬಗೆಹರಿಸಲಿದ್ದಾರೆ. ಆದ್ದರಿಂದ ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಸಂಘಟನೆ ಮುಖ್ಯ’ ಎಂದರು.

‘ಸಿಂಧಿಯಾ 24 ಕ್ಯಾರೆಟ್‌ ದ್ರೋಹಿ’
‘ಪಕ್ಷದಿಂದ ಹೊರನಡೆದ ಕ‍ಪಿಲ್‌ ಸಿಬಿಲ್‌ ಅವರು ಘನತೆಯಿಂದ ಮೌನವಾಗಿದ್ದಾರೆ. ಇಂಥವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಬಹುದು. ಆದರೆ, 24 ಕ್ಯಾರೆಟ್‌ ದ್ರೋಹಿಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಹಿಮಂತ್‌ ಬಿಸ್ವ ಶರ್ಮಾ ಅವರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಅಧಿವೇಶ: ಕಾರ್ಯತಂತ್ರ ಚರ್ಚಿಸಲು ಸಭೆ

ನವದೆಹಲಿ: ಡಿ.7ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಪಕ್ಷದ ಹಿರಿಯ ಮುಖಂಡರು ಶನಿವಾರ ಸಭೆ ಸೇರಲಿದ್ದಾರೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌದರಿ, ರಾಜ್ಯಸಭೆಯ ಮುಖ್ಯ ಸಚೇತಕ ಜೈರಾಂ ರಮೇಶ್‌, ಲೋಕಸಭೆಯ ಮುಖ್ಯ ಸಚೇತಕ ಕೆ. ಸುರೇಶ್‌ ಅವರು ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ನಿವಾಸಲ್ಲಿ ಸಭೆ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.