ADVERTISEMENT

LIVE | ‘ಭಾರತ್‌ ಬಂದ್‌': ರಾಜ್ಯದಲ್ಲಿ ಪ್ರತಿಭಟನೆ ನಿರಂತರ, ಹಲವು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ

ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘಗಳು, 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ಭಾರತ್‌ ಬಂದ್‌ ಆಚರಿಸುತ್ತಿವೆ. ಬಂದ್‌ನ ಕ್ಷಣ ಕ್ಷಣ ಮಾಹಿತಿಯ ತಾಜಾ ಅಪ್ಡೇಟ್‌ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 12:10 IST
Last Updated 8 ಡಿಸೆಂಬರ್ 2020, 12:10 IST

ರಾಜ್ಯದಲ್ಲಿ ಭಾರತ್‌ ಬಂದ್‌ಗೆ ಬೆಂಬಲವಿಲ್ಲ: ಬಿಎಸ್‌ವೈ

ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಬಂದ್‌ಗೆ ಜನರು ಬೆಂಬಲ ಸೂಚಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಪರವಾಗಿದೆ. ಪ್ರಧಾನಿ ಮೋದಿ ಅವರು ರೈತ ವಿರೋಧಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಉಚಿತವಾಗಿ ಹಾಲು ವಿತರಿಸಿ, ರೈತರ ಪ್ರತಿಭಟನೆಗೆ ಬೆಂಬಲ

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿರುವ ವಾಡಿಗೋಡ್ರಿ ಹಳ್ಳಿಯ ರೈತರು ತಾವು ಕರೆದ ಹಾಲನ್ನು ಮಂಗಳವಾರ ಸುತ್ತಮುತ್ತಲಿನ ಹಳ್ಳಿಗರಿಗೆ ಉಚಿತವಾಗಿ ವಿತರಿಸುವ ಮೂಲಕ ನೂತನ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಕರೆ ನೀಡಿರುವ ‘ಭಾರತ್‌ ಬಂದ್‌‘ಗೆ ಬೆಂಬಲ ವ್ಯಕ್ತಪಡಿಸಿದರು.

ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ

ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಗಳು ನೀಡಿರುವ ‘ಭಾರತ್‌ ಬಂದ್‌’ ಕರೆಗೆ ವಿವಿಧ ಸಂಘಟನೆಗಳು ಸೇರಿದಂತೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಕೆ.ಆರ್‌.ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು

ಹೊಸಪೇಟೆಯಲ್ಲಿ ಮುಂದುವರಿದ ಪ್ರತಿಭಟನೆ

ಪ್ರತಿಭಟನಾಕಾರರು ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಮುಕೇಶ್ ಅಂಬಾನಿ, ಅದಾನಿ ಹಾಗೂ ನರೇಂದ್ರ ಸಿಂಗ್ ತೋಮರ್ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಸರೋಜಿನಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕಪ್ಪು ಪಟ್ಟಿ ಧರಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಬಳ್ಳಾರಿಯಲ್ಲಿ‌ ಬಂದ್ ಅಂಗವಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ ಕೆ.ಸೋಮಶೇಖರ್ ಮಾತನಾಡಿದರು.

ರಾಮನಗರದ ಐಜೂರು ವೃತ್ತದಲ್ಲಿ ರೈತ ಸಂಘದ ವಿವಿಧ ಬಣಗಳು ಪ್ರತಿಭಟನೆ ನಡೆಸಿದವು.

ಹೊಸಪೇಟೆ: ನಗರ ಸಂಪೂರ್ಣ ಸ್ತಬ್ಧ

ಹೊಸಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಈಗ ರೋಟರಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸುತ್ತಿದ್ದಾರೆ. ಬಂದ್‌ಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಬಂದ್‌ನಿಂದ ನಗರ ಸಂಪೂರ್ಣ ಸ್ತಬ್ಧವಾಗಿದೆ.

ಚಾಮರಾಜನಗರ: ವಿಪಕ್ಷಗಳು, ಸಂಘಟನೆಗಳು ಒಟ್ಟಿಗೆ ಪ್ರತಿಭಟನೆ

ಚಾಮರಾಜನಗರ: ಕಾಂಗ್ರೆಸ್, ಬಿಎಸ್‌ಪಿ, ಎಸ್‌ಡಿಪಿಐ, ರೈತ ಸಂಘಗಳು, ಪ್ರಗತಿಪರ, ದಲಿತ, ಕಾರ್ಮಿಕ ಸಂಘಟನೆಗಳಿಂದ ಒಟ್ಟಾಗಿ ಪ್ರತಿಭಟನೆ.‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ತೆರೆದಿರುವ ಅಂಗಡಿಗಳನ್ನು ಮುಚ್ಚಿಸುತ್ತಿರುವ ಪ್ರತಿಭಟನಕಾರರು. ಬಿಜೆಪಿ ಬೆಂಬಲಿಗರು, ಮುಖಂಡರ ಅಂಗಡಿಗಳು ತೆರೆದಿವೆ.  ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಣೆ. ಬಹುತೇಕ ಬ್ಯಾಂಕುಗಳು ಬಂದ್ ಆಗಿವೆ.

ಬೆಂಗಳೂರಿನ ಕಾರ್ಪೊರೇಷನ್‌ ವೃತ್ತದ ಸಮೀಪ ವಾಹನ ದಟ್ಟಣೆ

ಎಲ್ಲೆಲ್ಲಿ ಪ್ರತಿಭಟನೆಯ ಕಾವು ಹೇಗಿದೆ?

ಬೀದರ್‌ನಲ್ಲಿ ಪ್ರತಿಭಟನೆ ಆರಂಭ

ಸರ್ಕಾರ ರೈತರಿಗೆ ಅನ್ಯಾಯ ಮಾಡುವುದಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಯಾವುದೇ ರೀತಿಯಲ್ಲೂ ರೈತರಿಗೆ ಅನ್ಯಾಯ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ರಸ್ತೆ ಬಂದ್

ಭಾರತ ಬಂದ್ ಪ್ರಯುಕ್ತ ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ವಿವಿಧ ರೈತಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಸ್ತೆ ಬಂದ್ ಮಾಡಿ  ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಗೂ ಮುನ್ನ ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿದರು.

ವಿಜಯಪುರ: ಸಂಚಾರ ಅಬಾಧಿತ, ಜನಜೀವನ ಸಹಜ

ವಿಜಯಪುರ: ಭಾರತ್ ಬಂದ್ ಬೆಂಬಲಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಕರ್ನಾಟಕ ಪ್ರಾಂತ ರೈತ ಸಂಘ, ರೈತ ಕೃಷಿ ಕಾರ್ಮಿಕಕರ ಸಂಘಟನೆ, ರಾಜ್ಯ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ಕರವೇ, ಕಾಂಗ್ರೆಸ್ ಕಾರ್ಯಕರ್ತರು ಬಂದ್ ಬೆಂಬಲಿಸಿ ಪ್ರತೇಕವಾಗಿ ಪ್ರತಿಭಟನೆ ನಡೆಸಿದರು.   

ಬಂದ್ ನೀರಸ ಪ್ರತಿಕ್ರಿಯೆ: ಭಾರತ್ ಬಂದ್‌ಗೆ  ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ, ಮಳಿಗೆಗಳು ಎಂದಿನಂತೆ ಬಾಗಿಲು ತೆರೆದಿದ್ದವು, ವಾಹನ ಸಂಚಾರ ಅಬಾಧಿತವಾಗಿತ್ತು. ಜನಜೀವನ ಸಹಜವಾಗಿತ್ತು.

ದಾವಣಗೆರೆ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ದಾವಣಗೆರೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ನೀಡಿರುವ ಭಾರತ್‌ ಬಂದ್‌ ಕರೆಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಸಿಪಿಐ, ಎಐಟಿಯುಸಿ, ಎಐಯುಟಿಯುಸಿ, ಸಿಐಟಿಯು, ನೆರಳು ಬೀಡಿ ಕಾರ್ಮಿಕರ ಸಂಘಟನೆ, ಆಮ್‌ ಆದ್ಮಿ ಪಾರ್ಟಿ, ಜನಸಕ್ತಿ, ರೈತ ಸಂಘ ಮತ್ತು ಹಸಿರುಸೇನೆ ಹೀಗೆ ವಿವಿಧ ಸಂಘಟನೆಗಳು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬಸ್‌ ಸಂಚಾರ ಸ್ಥಗಿತಗೊಂಡಿತು.

Watch: ರಾಜ್ಯದಲ್ಲಿ ಭಾರತ್ ಬಂದ್ ಹೇಗಿದೆ?

ಬಳ್ಳಾರಿ: ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ

ಬಳ್ಳಾರಿ: ಅಖಿಲ ಭಾರತ ಬಂದ್ ಪ್ರಯುಕ್ತ ನಗರದ ಗಡಿಗಿ‌ ಚೆನ್ನಪ್ಪ ವೃತ್ತದಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ತರಕಾರಿಗಳನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು.

ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್​ ರಫೀಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಮುಖಂಡರಾದ ಕಲ್ಲುಕಂಭ ಪಂಪಾಪತಿ,  ಅಸುಂಡಿ ನಾಗರಾಜಗೌಡ, ಜೆ.ಎಸ್.ಆಂಜನೇಯಲು, ಬಿ.ಎಂ‌.ಪಾಟೀಲ ನೇತೃತ್ವ ವಹಿಸಿದ್ದರು.

ತುಮಕೂರು: ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ

ತುಮಕೂರು ಟೌನ್‌ಹಾಲ್ ಬಳಿ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಣಕು ಶವಯಾತ್ರೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಶಿರಸಿಯಲ್ಲಿ ಕಾಂಗ್ರೆಸ್‌ನಿಂದ ರಸ್ತೆ ತಡೆ

ರೈತರ ಹೋರಾಟಕ್ಕೆ ಬೆಂಬಲಿಸಿ ಶಿರಸಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಲಾಯಿತು.

ಸಿಎಂ ಕೇಜ್ರಿವಾಲ್‌ ಗೃಹ ಬಂಧನದಲ್ಲಿಲ್ಲ: ಡಿಸಿಪಿ ಆಂಟೊ ಆಲ್ಫಾನ್ಸೊ

'ಎಎಪಿ ಮತ್ತು ಇತರೆ ಯಾವುದೇ ಪಕ್ಷಗಳೊಂದಿಗೆ ಘರ್ಷಣೆ ತಪ್ಪಿಸುವ ನಿಟ್ಟಿನಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿಲ್ಲ. ದೆಹಲಿಯ ಸಿಎಂ ಆಗಿ ಅವರು ಎಲ್ಲಿ ಬೇಕಾದರೂ ಸಂಚರಿಸಬಹುದಾಗಿದೆ. ಆ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಲಾಗಿದೆ' ಎಂದು ದೆಹಲಿ ಉತ್ತರ ವಲಯ ಡಿಸಿಪಿ ಆಂಟೊ ಆಲ್ಫಾನ್ಸೊ ಹೇಳಿದ್ದಾರೆ.

ರಾಜ್ಯದಲ್ಲಿ ಬಂದ್‌ಗೆ ಜನ ಸಹಕಾರ ಇಲ್ಲ: ಬಿಎಸ್‌ವೈ

ಹಾವೇರಿ: ರೈತ ಸಂಘ ಪ್ರತಿಭಟನೆ

ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಭಾರತ್ ಬಂದ್ ಬೆಂಬಲಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ಆರಂಭಗೊಂಡಿತು.

ಮೈಸೂರು: ನಡೆಯುತ್ತಿದೆ ಪ್ರತಿಭಟನಾ ಮೆರವಣಿಗೆ

ಮೈಸೂರಿನಲ್ಲಿ ಚಿಕ್ಕಗಡಿಯಾರದಿಂದ ಪ್ರತಿಭಟನಾ ಮೆರವಣಿಗೆ ದೇವರಾಜ ಅರಸು ರಸ್ತೆಗೆ ಬಂದಿದೆ. ರಾಮಸ್ವಾಮಿ ವೃತ್ತದ ಕಡೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗೃಹ ಬಂಧನ: ಎಎಪಿ

'ಬಿಜೆಪಿಯ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ. ಸೋಮವಾರ ಸಿಂಘು ಗಡಿ ಭಾಗದಲ್ಲಿ ರೈತರನ್ನು ಭೇಟಿ ಮಾಡಿದ ನಂತರದಿಂದ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರ ನಿವಾಸಕ್ಕೆ ಯಾರೊಬ್ಬರಿಗೂ ಪ್ರವೇಶಿಸಲು ಅಥವಾ ಅಲ್ಲಿಂದ ಹೊರ ಬರಲು ಅವಕಾಶ ನೀಡುತ್ತಿಲ್ಲ' ಎಂದು ಎಎಪಿ ಟ್ವೀಟಿಸಿದೆ.  

ಉಡುಪಿ: ತಟ್ಟದ ಬಂದ್‌ ಬಿಸಿ

ಉಡುಪಿ: ಭಾರತ್‌ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಆಟೊಗಳು ಕೂಡ ರಸ್ತೆಗಿಳಿದಿವೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿಲ್ಲ. ಸಾರ್ವಜನಿಕರಿಗೆ ಬಂದ್‌ ಬಿಸಿ ತಟ್ಟಿಲ್ಲ.

ಹಾಸನ: ಬಂದ್‌ಗೆ ನೀರಸ ಪ್ರತಿಕ್ರಿಯೆ

ಹಾಸನ: ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ ಸೇರಿ ವಾಹನ ಸಂಚಾರ ಯಥಾಸ್ಥಿತಿ ಇದೆ. ಬಸ್, ಆಟೊ ಮತ್ತು ಲಾರಿ ಸಂಚಾರದಲ್ಲಿ ವ್ಯತ್ಯಯವಾಗಿಲ್ಲ. ಅಂಗಡಿ,  ಹೋಟೆಲ್ ಬಾಗಿಲು ತರೆದಿವೆ.  ಬಂದ್‌ಗೆ ಜೆಡಿಎಸ್, ಕಾಂಗ್ರೆಸ್ ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

ವಿಪಕ್ಷಗಳಿಂದ ರೈತರ ದಿಕ್ಕು ತಪ್ಪಿಸುವ ಯತ್ನ: ಸಚಿವ ಸುಧಾಕರ್

ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರ ಸರ್ಕಾರದ ಕೃಷಿ ಸುಧಾರಣೆಗೆ ವಿರೋಧ: ಬಿಎಸ್‌ವೈ

ಭಾರತ ಬಂದ್‌: ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭ

ಬೆಂಗಳೂರು: ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ

ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜು ಅವರು ಮಾತನಾಡುತ್ತಿದ್ದಾರೆ. -ಪ್ರಜಾವಾಣಿ ಚಿತ್ರ

ವಿಧಾನಸೌಧ ಆವರಣದಲ್ಲಿ ಕಾಂಗ್ರೆಸ್‌ ಮುಖಂಡರ ಪ್ರತಿಭಟನೆ

ಬೆಂಗಳೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ಇಂದು ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ .ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು: ಸಂಚರಿಸುತ್ತಿವೆ ಕೆಎಸ್ಆರ್‌ಟಿಸಿ ಬಸ್‌ಗಳು

ಬೆಂಗಳೂರು ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸಂಚರಿಸುತ್ತಿವೆ. –ಪ್ರಜಾವಾಣಿ ಚಿತ್ರ

ಕೆ.ಆರ್.ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು

ಕೆ.ಆರ್.ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ಆರಂಭವಾಗಿರುವುದು. ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.

ರಾಮನಗರ: ಮಿಶ್ರ ಪ್ರತಿಕ್ರಿಯೆ

ನಗರದಲ್ಲಿ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಅಂಗಡಿ ಮುಂಗಟ್ಟು, ಮಾರುಕಟ್ಟೆಗಳು ತೆರೆದಿವೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಇದೆ.

ಚಿತ್ರದುರ್ಗ: ಗಾಂಧಿ ವೃತ್ತದಲ್ಲಿ ಪ್ರತಿಭಟನೆ

ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ಹಲವು ಸಂಘಟನೆಗಳು ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಭೀಮ್‌ ಆರ್ಮಿ ಕಾರ್ಯಕರ್ತರು ಕೈಗೆ ಹಗ್ಗ ಕಟ್ಟಿಕೊಂಡು ಅಣಕು ಪ್ರದರ್ಶನ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ರಾಜ್ಯ ರೈತ ಸಂಘ, ಸಿಪಿಐ, ಎಸ್‌ಯುಸಿಐ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಕಾರ್ಯಕರ್ತರು ಬಸ್ ಸಂಚಾರ ತಡೆಯಲು ರಸ್ತೆಯಲ್ಲಿ ಧರಣಿ ನಡೆಸಿದರು. ಆಟೊ, ಬಸ್ ಸಂಚಾರ ಎಂದಿನಂತೆ ನಡೆಯುತ್ತಿದೆ. ಹೋಟೆಲ್, ಬ್ಯಾಂಕ್, ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿವೆ. ಜನಸಂಚಾರ ಸಹಜವಾಗಿದೆ.

ರಾಯಚೂರು: ಸರ್ಕಾರಿ ಬಸ್ ಸಂಚಾರ ಸ್ಥಗಿತ

ಭಾರತ್ ಬಂದ್‌ನಿಂದ ಗಲಾಟೆ ನಡೆಯಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಹೀಗಾಗಿ ನಿಲ್ದಾಣದಲ್ಲಿ ಕೆಲವೇ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುವುದು ಕಂಡುಬಂತು.
'ಪ್ರಯಾಣಿಕರು ಬಂದರೆ ಬಸ್‌ಗಳನ್ನು ಬಿಡಲಾಗುವುದು. ಹೊರಜಿಲ್ಲೆಗಳಿಂದ ಬಂದಿರುವ ಬಸ್‌ಗಳು ಎಂದಿನಂತೆ ಸಂಚರಿಸಲಿವೆ' ಎಂದು ಎನ್‌ಇಕೆಆರ್‌ಟಿಸಿ ಅಧಿಕಾರಿ ಹೇಳಿದರು.
ಅಂಗಡಿ ಮುಗಟ್ಟುಗಳು ಎಂದಿನಂತೆ ವಹಿವಾಟು ಆರಂಭಿಸಿವೆ. ಆದರೆ, ಜನಸಂಚಾರ ಹಾಗೂ ವಾಹನಗಳ ಸಂಚಾರ ಎಂದಿನಂತಿಲ್ಲ.‌

ಯಾದಗಿರಿ: ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

ಯಾದಗಿರಿ: ಭಾರತ್ ಬಂದ್ ಅಂಗವಾಗಿ ಮಂಗಳವಾರ ನಗರದ ಹೊಸ ಬಸ್ ನಿಲ್ದಾಣ ಬಳಿ ರೈತ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಬಾಗಲಕೋಟೆ: ಬಂದ್‌ಗೆ ದೊರೆಯದ ಸ್ಪಂದನೆ

ಬಾಗಲಕೋಟೆ: ಭಾರತ್ ಬಂದ್ ಗೆ ಬಾಗಲಕೋಟೆ ನಗರ ಹಾಗೂ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ, ವಾಹನ ಸಂಚಾರ ಎಂದಿನಂತೆಯೇ ಇದೆ.

ರೈತರ ಹೋರಾಟ ಬೆಂಬಲಿಸಿ ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಕೊಪ್ಪಳ: ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘಟನೆಗಳು

ಕೊಪ್ಪಳ: ಭಾರತ ಬಂದ್ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಬೆಳಂ ಬೆಳಿಗ್ಗೆ ರೈತ ಸಂಘಟನೆಗಳು ಟೈರ್ ಗೆ ಬೆಂಕಿ ಹಚ್ಚಿದರು. ಬೆಳಂಬೆಳಿಗ್ಗೆ ಪ್ರತಿಭಟನೆ ಕಾವು ಜೋರಾಗಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿಯ ಟೋಲ್ ಗೇಟ್ ಬಳಿ ರೈತ ಹಿತರಕ್ಷಣ ವೇದಿಕೆ ಪ್ರತಿಭಟನೆ ಕೈಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ: ಜನಜೀವನ‌ ಅಸ್ತವ್ಯಸ್ತ

ಬಳ್ಳಾರಿ: ಅಖಿಲ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ಸದ್ಯ‌ ಮಿಶ್ರ ಪ್ರತಿಕ್ರಿಯೆ ದೊರಕಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ನಿಲ್ದಾಣದಲ್ಲಿದ್ದರೂ ಪ್ರಯಾಣಿಕರು ಬಾರದೆ ನಿಂತಿವೆ. ಕೆಲವು ತಾಲ್ಲೂಕುಗಳಲ್ಲಿ ಕೆಲವೇ ಬಸ್‌ಗಳು ಸಂಚರಿಸುತ್ತಿವೆ. ಆಟೋರಿಕ್ಷಾಗಳ ಸಂಚಾರ ನಡೆದಿದೆ. ಔಷಧಿ ಅಂಗಡಿ, ಪೆಟ್ರೋಲ್ ಬಂಕ್‌ಗಳು ತೆರೆದಿವೆ. ಇತರೆ ಕೆಲವು ಅಂಗಡಿಗಳು ತೆರೆದಿದ್ದು ಬಹುತೇಕ ಮುಚ್ಚಿವೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇಲ್ಲ

ಚಾಮರಾಜನಗರ: ಭಾರತ್ ಬೆಂಬಲಿಸಿ ರೈತ, ದಲಿತ ಪ್ರಗತಿಪರ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ.  ಆಟೊಗಳ ಓಡಾಟ ಇದೆ. ಅಂಗಡಿ ಮುಂಗಟ್ಟುಗಳು ಕೆಲವು ತೆಗೆದಿದ್ದರೆ, ಇನ್ನೂ ಕೆಲವು ತೆರೆದಿಲ್ಲ. ಜನ ಸಂಚಾರ ಕಡಿಮೆ ಇದೆ.

ತುಮಕೂರು: ಎಂದಿನಂತೆ ವಾಹನ ಸಂಚಾರ

ತುಮಕೂರಿನಲ್ಲಿ ಬಂದ್ ಆಗಿಲ್ಲ. ವಾಹನ ಸಂಚಾರ ಎಂದಿನಂತೆ ಇದೆ.

ಕಲಬುರ್ಗಿ: ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಬಂದ್

ಕಲಬುರ್ಗಿಯ ರಾಷ್ಟ್ರಪತಿ ಚೌಕದಿಂದ ಕೇಂದ್ರ ‌ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಪೊಲೀಸರು ‌ಬ್ಯಾರಿಕೇಡ್ ಇರಿಸಿ ಬಂದ್ ಮಾಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಯ ಎಲ್ಲ ‌ಬಸ್‌ಗಳನ್ನು ‌ನಿಲ್ದಾಣ ಹಾಗೂ ಡಿಪೊಗಳಲ್ಲಿ ನಿಲ್ಲಿಸಲಾಗಿದೆ.

ಹೊಸಪೇಟೆ: ಭಾರತ ಬಂದ್‌ಗೆ ಉತ್ತಮ ಸ್ಪಂದನೆ

ಹೊಸಪೇಟೆ: ಭಾರತ ಬಂದ್‌ಗೆ ಹೊಸಪೇಟೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಿಗ್ಗೆಯಿಂದ ಮಳಿಗೆಗಳು ಬಾಗಿಲು ತೆರೆದಿಲ್ಲ. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಇದೆ. ಸೀಮಿತ ಸಂಖ್ಯೆಯ ಬಸ್‌ಗಳು, ಆಟೊಗಳು ಸಂಚರಿಸುತ್ತಿವೆ.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಲು ಸಿದ್ಧತೆ ನಡೆಸಿದ್ದಾರೆ‌.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಳಗಾವಿಯ ಎಪಿಎಂಸಿಯಲ್ಲಿ ವಹಿವಾಟು ಎಂದಿನಂತೆಯೇ ಇದೆ

ಚಿಕ್ಕಮಗಳೂರು: ಅಂಗಡಿ, ಹೋಟೆಲ್‌ ಮುಚ್ಚಲು ಮನವಿ

ಚಿಕ್ಕಮಗಳೂರು: ಅಂಗಡಿ, ಮಳಿಗೆ, ಹೋಟೆಲ್‌ಗಳನ್ನು ಮುಚ್ಚುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.

ಹುಬ್ಬಳ್ಳಿ: ಬಸ್‌ ಡಿಪೊ ಮುಂದಿನ ರಸ್ತೆ ತಡೆದು ಪ್ರತಿಭಟನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಕೃಷಿ ಮಸೂದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ ಬಂದ್‌ ಹಿನ್ನೆಲೆಯಲ್ಲಿ ಇಲ್ಲಿ ಮಂಗಳವಾರ ರೈತ, ಕನ್ನಡಪರ ಸಂಘಟನೆಗಳು ಬಸ್ ಡಿಪೊ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದವು.

ಚಿಕ್ಕಮಗಳೂರು: ಭಾರತ್ ಬಂದ್ ಬೆಂಬಲಿಸಿ ಮೆರವಣಿಗೆ

ಚಿಕ್ಕಮಗಳೂರು: ಭಾರತ್ ಬಂದ್ ಬೆಂಬಲಿಸಿ ರೈತ, ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸುತ್ತಿವೆ.

ನಗರದಲ್ಲಿ ಬಹುತೇಕ ಅಂಗಡಿ, ಮಳಿಗೆಗಳು ಮುಚ್ಚಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳು, ಇತರ ವಾಹನಗಳು  ಸಂಚರಿಸುತ್ತಿವೆ.

ಮಂಗಳೂರು: ಬಸ್‌ಗಳ ಸಂಚಾರ ಎಂದಿನಂತೆ

ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇದೆ.

ಕಲಬುರ್ಗಿ: ಬಂದ್ ಬೆಂಬಲಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ

ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿರುವ ಭಾರತ ಬಂದ್ ಅಂಗವಾಗಿ ವಿವಿಧ ರೈತ ಸಂಘಟನೆಗಳ ಮುಖಂಡರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ‌ಬೆಳಿಗ್ಗೆ ‌ಪ್ರತಿಭಟನೆ ನಡೆಸಿದರು.

ಬೇರೆ ಜಿಲ್ಲೆಗಳಿಗೆ ತೆರಳುವ ಬಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಳಗಾವಿ: ಚಹಾ ಮಾಡಿ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರವು ರೈತ ವಿರೋಧಿ‌ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅಗ್ರಹಿಸಿ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ರೈತ ಸಂಘದವರು ಚಹಾ ಮಾಡಿ ಪ್ರತಿಭಟನೆ ನಡೆಸಿದರು.

ಹಳೆಯ ಟೈಯರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಟೈಯರ್ ವಶಕ್ಕೆ ಪಡೆಯಲು ಮುಂದಾದ ಪೊಲೀಸರೊಂದಿಗೆ ಮಾತಿನ‌ ಚಕಮಕಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಸ್ವಾಭಿಮಾನಿ ಸಂಘಟನೆ ಕಾರ್ಯಕರ್ತರು ಬುಲ್ದಾನ್‌ ಜಿಲ್ಲೆಯಲ್ಲಿ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಾಗೂ ರೈತರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಭಾರತ್‌ ಬಂದ್‌ಗೆ ಬೆಂಬಲ ಸೂಚಿಸಿದರು.

ಮೈಸೂರು: ಬಸ್‌ಗಳ ಸಂಚಾರ ಸ್ಥಗಿತ

ಬಸ್ ಸಂಚಾರಕ್ಕೆ ಪ್ರತಿಭಟನಕಾರರು ತಡೆಯೊಡ್ಡಿದ್ದಾರೆ. ಇದರಿಂದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಮೈಸೂರಿನಲ್ಲಿ ಇನ್ನುಳಿದ ಕಡೆ ಜನಜೀವನ ಯಥಾಸ್ಥಿತಿಯಲ್ಲಿದೆ. ಆಟೊಗಳು ಸಂಚರಿಸುತ್ತಿವೆ. ಅಂಗಡಿಗಳು ತೆರೆದಿವೆ. ರಸ್ತೆಬದಿ ವ್ಯಾಪಾರ ಎಂದಿನಂತೆ ನಡೆದಿದೆ. ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ‌‌.

ಮೋದಿ ವಿರೋಧಿಸುವುದೇ ಕೆಲಸ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಮೈಸೂರಿನಲ್ಲಿ ಪ್ರತಿಭಟನೆ ಆರಂಭ

ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಮಂಗಳವಾರ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ ಆರಂಭಗೊಂಡಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ರೈತರು, ವಿವಿಧ ರಾಜಕೀಯ ಪಕ್ಷಗಳು, ನಾನಾ ಸಂಘಟನೆಗಳು ಕರೆಕೊಟ್ಟಿರುವ ಬಂದ್‌ಗೆ ಬ್ಯಾಂಕ್‌ ನೌಕರರ ಸಂಘಗಳು ಬೆಂಬಲ ವ್ಯಕ್ತಪಡಿಸಿಲ್ಲ.

ಇಂದಿನ ಬಂದ್‌ಗೆ ರೈತರ ಸಿದ್ಧತೆ, ಕಾಯ್ದೆ ರದ್ದತಿಯೇ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.