ಗೋಪಾಲಪುರ: ಭಾರತದ ರಕ್ಷಣಾ ಸಾಮರ್ಥ್ಯಗಳ ಗಮನಾರ್ಹ ಪ್ರಗತಿಯಲ್ಲಿ, ಸೋಲಾರ್ ಡಿಫೆನ್ಸ್ ಅಂಡ್ ಏರೊಸ್ಪೇಸ್ ಲಿಮಿಟೆಡ್((ಎಸ್‌ಡಿಎಎಲ್) ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಮೈಕ್ರೊ ರಾಕೆಟ್‌ಗಳು ಮತ್ತು ಕ್ಷಿಪಣಿಗಳಿಂದ ಸುಸಜ್ಜಿತವಾದ ಕಡಿಮೆ ವೆಚ್ಚದ, ಶತ್ರುಗುರಿಗಳ ಮೇಲೆ ಅತ್ಯಂತ ಪ್ರಬಲವಾಗಿ ಎರಗಬಲ್ಲ ‘ಹಾರ್ಡ್ ಕಿಲ್ ಮೋಡ್’ಕೌಂಟರ್-ಡ್ರೋನ್ ವ್ಯವಸ್ಥೆ 'ಭಾರ್ಗವಾಸ್ತ್ರ'ದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ವಿಶೇಷವಾಗಿ ಸೂಕ್ಷ್ಮ ಮತ್ತು ಎತ್ತರದ ಕಾರ್ಯಾಚರಣಾ ವಲಯಗಳಲ್ಲಿ ಹಿಂಡು ಹಿಂಡಾಗಿ ಬರುವ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಇದು ಗಮನಾರ್ಹ ಪಾತ್ರ ನಿರ್ವಹಿಸುತ್ತದೆ.
ಈ ಕೌಂಟರ್ ಡ್ರೋನ್ ವ್ಯವಸ್ಥೆಯಲ್ಲಿ ಬಳಸಲಾದ ಮೈಕ್ರೊ ರಾಕೆಟ್‌ಗಳನ್ನು ಒಡಿಶಾದ ಗೋಪಾಲಪುರದ ಸೀವರ್ಡ್ ಫೈರಿಂಗ್ ರೇಂಜ್‌ನಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಯಿತು. ಈ ವ್ಯವಸ್ಥೆಯು ನಿಗದಿತ ಎಲ್ಲ ಗುರಿಗಳನ್ನು ಬೇಧಿಸುವ ಮೂಲಕ ಯಶಸ್ವಿಯಾಯಿತು.
ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗೋಪಾಲಪುರದಲ್ಲಿ ಮೇ 13ರಂದು ಮೂರು ಪ್ರಯೋಗಗಳನ್ನು ನಡೆಸಲಾಯಿತು. ತಲಾ ಒಂದು ರಾಕೆಟ್ ಅನ್ನು ಹಾರಿಸುವ ಮೂಲಕ ಮೊದಲೆರಡು ಪ್ರಯೋಗಗಳನ್ನು ನಡೆಸಲಾಯಿತು. 2 ಸೆಕೆಂಡುಗಳ ಒಳಗೆ ಮತ್ತೆರಡು ರಾಕೆಟ್‌ಗಳನ್ನು ಸಾಲ್ವೊ ಮೋಡ್‌ನಲ್ಲಿ ಹಾರಿಸುವ ಮೂಲಕ ಮತ್ತೊಂದು ಪ್ರಯೋಗವನ್ನು ನಡೆಸಲಾಯಿತು.
ಎಲ್ಲ ನಾಲ್ಕು ರಾಕೆಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು. ಅಗತ್ಯವಿದ್ದ ಎಲ್ಲ ಮಾನದಂಡಗಳನ್ನು ರಾಕೆಟ್‌ಗಳು ಪೂರೈಸಿದವು. ದೊಡ್ಡ ಪ್ರಮಾಣದ ಡ್ರೋನ್ ದಾಳಿಗಳನ್ನು ಹೊಡೆದುರುಳಿಸುವಲ್ಲಿ ಇದರ ಪ್ರವರ್ತಕ ತಂತ್ರಜ್ಞಾನವು ನೆರವಾಗಲಿದೆ ಎಂದು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.