ADVERTISEMENT

ವರವರ ರಾವ್ ಜಾಮೀನು ಅರ್ಜಿ: ಸೋಮವಾರ ವಿಚಾರಣೆ

ಪಿಟಿಐ
Published 10 ಜುಲೈ 2022, 12:22 IST
Last Updated 10 ಜುಲೈ 2022, 12:22 IST
ವರವರ ರಾವ್
ವರವರ ರಾವ್   

ನವದೆಹಲಿ: ತೆಲುಗು ಕವಿ, ಭೀಮಾ ಕೊರೆಗಾಂವ್‌–ಎಲ್ಗಾರ್ ಪರಿಷತ್‌ ಪ್ರಕರಣದ ಆರೋಪಿ ಪಿ.ವರವರ ರಾವ್ ಅವರು ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

ಈ ಮೊದಲು ಬಾಂಬೆ ಹೈಕೋರ್ಟ್‌ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವರವರರಾವ್ ಅವರು ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್‌.ರವೀಂದ್ರ ಭಟ್‌ ಮತ್ತು ಸುಧಾನ್ಷು ಧುಲಿಯಾ ಅವರಿರುವ ಪೀಠ ಅರ್ಜಿಯ ವಿಚಾರಣೆ ನಡೆಸುವ ಸಂಭವವಿದೆ.

83 ವರ್ಷದ ವರವರರಾವ್ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ನೂಪುರ್‌ ಕುಮಾರ್ ಅವರು, ಆರೋಗ್ಯ ಸ್ಥಿತಿ ಕ್ಷೀಣವಾಗುತ್ತಿರುವುದು ಹಾಗೂ ವಯೋಮಾನದ ಕಾರಣಕ್ಕಾಗಿ ಶಾಶ್ವತ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಹೈದರಾಬಾದ್‌ಗೆ ತಮ್ಮನ್ನು ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂಬ ಮನವಿಯನ್ನೂ ಹೈಕೋರ್ಟ್‌ ತಿರಸ್ಕರಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಕುರಿತು ರಾವ್ ಅವರನ್ನು ಆ. 28, 2018 ರಂದು ಹೈದರಾಬಾದ್‌ನ ಅವರ ನಿವಾಸದಲ್ಲಿ ಬಂಧಿಸಿದ್ದು, ಅಂದಿನಿಂದ ವಿಚಾರಣಾಧೀನ ಕೈದಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.