ADVERTISEMENT

ದೆಹಾತ್‌ ದುರಂತ ಪ್ರಶ್ನಿಸಿ ಹಾಡು: ಗಾಯಕಿ ನೇಹಾಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 16:05 IST
Last Updated 22 ಫೆಬ್ರುವರಿ 2023, 16:05 IST
ಉತ್ತರ ಪ್ರದೇಶದ ದೆಹಾತ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ತಾಯಿ, ಮಗಳು ಸಜೀವ ದಹನವಾದ ಸ್ಥಳ    –ಪಿಟಿಐ ಚಿತ್ರ
ಉತ್ತರ ಪ್ರದೇಶದ ದೆಹಾತ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ತಾಯಿ, ಮಗಳು ಸಜೀವ ದಹನವಾದ ಸ್ಥಳ    –ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಕಾನ್ಪುರದ ದೆಹಾತ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಾಯಿ, ಮಗಳು ಸಜೀವ ದಹನಗೊಂಡಿದ್ದ ಪ್ರಕರಣ ಕುರಿತು ವಿಡಂಬನಾತ್ಮಕವಾಗಿ ಹಾಡು ರಚಿಸಿದ್ದ ಭೋಜ್‌ಪುರಿ ಜಾನಪದ ಗಾಯಕಿ ನೇಹಾ ಸಿಂಗ್‌ ರಾಥೋಡ್‌ ಅವರಿಗೆ ಇಲ್ಲಿಯ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಪ್ರಶ್ನಿಸಿ ಹಾಡು ರಚಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇಹಾ ಅವರು ಅಪ್‌ಲೋಡ್‌ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಪೊಲೀಸರು ನೇಹಾ ಅವರಿಗೆ ಮಂಗಳವಾರ ರಾತ್ರಿ ನೋಟಿಸ್‌ ನೀಡಿದ್ದಾರೆ. ಈ ಹಾಡು ಜನರ ಮಧ್ಯೆ ದ್ವೇಷ ಭಾವನೆ ಕೆರಳಿಸುವಂತಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಾಡಿನ ಕುರಿತು ವಿವರಣೆ ನೀಡುವಂತೆ ಪೊಲೀಸರು ನೇಹಾ ಅವರಿಗೆ ಕೇಳಿದ್ದಾರೆ. ಜೊತೆಗೆ, ಈ ಹಾಡು ಸಮಾಜದ ಮೇಲೆ ಉಂಟುಮಾಡುವ ಋಣಾತ್ಮಕ ಪರಿಣಾಮದ ಕುರಿತು ತಿಳಿದಿದೆಯೇ ಎಂದು ಕೂಡಾ ಪ್ರಶ್ನಿಸಿದ್ದಾರೆ.

ADVERTISEMENT

ಈ ಪ್ರಶ್ನೆಗಳಿಗೆ ಉತ್ತರಿಸಲು ನೇಹಾ ಅವರಿಗೆ ಪೊಲೀಸರು 3 ದಿನಗಳ ಕಾಲಾವಕಾಶ ನೀಡಿದ್ದಾರೆ. ಉತ್ತರ ನೀಡಲು ಅವರು ವಿಫಲವಾದರೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಸಂಬಂಧಪಟ್ಟ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ನೋಟಿಸ್‌ ಕುರಿತು ಪ್ರತಿಕ್ರಿಯೆ ನೀಡಿರುವ ನೇಹಾ, ‘ಹಾಡಿನಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸರ್ಕಾರವು ನನಗೆ ನೋಟಿಸ್‌ ನೀಡಿದೆ. ಇದರಿಂದ ನಾನು ಹೆದರಿಲ್ಲ’ ಎಂದಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಕೂಡಾ ನೇಹಾ ಅವರು ಒಂದು ಹಾಡನ್ನು ರಚಿಸಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ತಮ್ಮ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿ ಹೊಂದಿದೆ ಎಂದು ಆದಿತ್ಯನಾಥ ಅವರು ನೀಡಿದ್ದ ಹೇಳಿಕೆಗಳನ್ನು ಆ ಹಾಡಿನಲ್ಲಿ ನೇಹಾ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.