ADVERTISEMENT

ಭೋಪಾಲ ವಿಜ್ಞಾನ ಹಬ್ಬದಲ್ಲಿ ಕನ್ನಡದ ಕಂಪು

ವಿಜ್ಞಾನ ಸಂವಹನದಲ್ಲಿ ಕನ್ನಡದ ಸಾಧನೆಗಳ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 11:38 IST
Last Updated 22 ಜನವರಿ 2023, 11:38 IST
   

ಭೋಪಾಲ: "ಜನಸಾಮಾನ್ಯರಿಗೆ ವಿಜ್ಞಾನವನ್ನು ಯಶಸ್ವಿಯಾಗಿ ತಲುಪಿಸಬೇಕೆಂದರೆ ಅದು ಅವರ ತಾಯ್ನುಡಿಯಲ್ಲೇ ಇರಬೇಕು," ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಮಹಾನಿರ್ದೇಶಕಿ ಡಾ. ಎನ್. ಕಲೈ ಸೆಲ್ವಿ ಹೇಳಿದರು. ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್ ಅಂಗವಾಗಿ ಆಯೋಜಿಸಲಾಗಿದ್ದ 'ವಿಜ್ಞಾನಿಕ' ವಿಜ್ಞಾನ ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ. 'ಕುತೂಹಲಿ' ಕಾರ್ಯಕ್ರಮದ ಅಂಗವಾಗಿ ವಿಜ್ಞಾನ್ ಪ್ರಸಾರ್ ಪ್ರಕಟಿಸಿರುವ 'ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು' (ಸಂ: ಟಿ. ಜಿ. ಶ್ರೀನಿಧಿ) ಹಾಗೂ 'ಜಾಣಪ್ರಶ್ನೆ' (ಲೇ: ಕೊಳ್ಳೇಗಾಲ ಶರ್ಮ) ಕೃತಿಗಳನ್ನು ಡಾ. ಕಲೈ ಸೆಲ್ವಿ ಲೋಕಾರ್ಪಣೆಗೊಳಿಸಿದರು. ವಿಜ್ಞಾನ ಭಾರತಿ ಅಧ್ಯಕ್ಷ ಡಾ. ಶೇಖರ್ ಮಾಂಡೆ, ಸೈನ್ಸ್ ರಿಪೋರ್ಟರ್ ಸಂಪಾದಕ ಹಸನ್ ಜಾವೇದ್ ಖಾನ್ ಉಪಸ್ಥಿತರಿದ್ದರು.

'ನಮ್ಮ ಭಾಷೆ, ನಮ್ಮ ವಿಜ್ಞಾನ' ಕುರಿತು ಆಯೋಜಿಸಲಾಗಿದ್ದ ಸಂವಾದದಲ್ಲಿ ಲೇಖಕ ಕೊಳ್ಳೇಗಾಲ ಶರ್ಮ ಭಾಗವಹಿಸಿ ಮಾತನಾಡಿದರು. "ವಿಜ್ಞಾನ ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪಾಡ್ಕಾಸ್ಟ್ ನಂತಹ ಹೊಸ ವಿಧಾನಗಳನ್ನು ಬಳಸುವುದು ಅಗತ್ಯ. ಆದರೆ ಚಾಟ್ ಜಿಪಿಟಿಯಂತಹ ಆವಿಷ್ಕಾರಗಳಲ್ಲಿ ನಾವು ಭಾರತೀಯ ಭಾಷೆಗಳನ್ನೂ ಬಳಸುವಂತಾಗಲು ಹೆಚ್ಚುಹೆಚ್ಚು ಪಠ್ಯವೂ ಸೃಷ್ಟಿಯಾಗಬೇಕು," ಎಂದು ಅವರು ಹೇಳಿದರು. ವಿಜ್ಞಾನ್ ಪ್ರಸಾರ್ ಮುಖ್ಯ ವಿಜ್ಞಾನಿ ಡಾ. ಟಿ. ವಿ. ವೆಂಕಟೇಶ್ವರನ್ ಸಂವಾದವನ್ನು ನಡೆಸಿಕೊಟ್ಟರು.

ADVERTISEMENT

ವಿಜ್ಞಾನ ಸಂವಹನದ ಹೊಸ ಸವಾಲು-ಸಾಧ್ಯತೆಗಳನ್ನು ಕುರಿತ ಗೋಷ್ಠಿಯಲ್ಲಿ 'ಇಜ್ಞಾನ' ಜಾಲಪತ್ರಿಕೆಯ ಟಿ. ಜಿ. ಶ್ರೀನಿಧಿ ಹಾಗೂ ಜಿ. ಎಸ್. ಅಭಿಷೇಕ್ ಭಾಗವಹಿಸಿದ್ದರು. ಭಾರತೀಯ ಭಾಷೆಗಳಲ್ಲಿ ವಿಜ್ಞಾನದ ಮಾಹಿತಿಯ ಕೊರತೆಯನ್ನು ಕಡಿಮೆ ಮಾಡಲು ತಂತ್ರಾಂಶ ಸಾಧನಗಳನ್ನು ಬಳಸುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಇಜ್ಞಾನ ಸಂಸ್ಥೆ ನಡೆಸಿದ ಪ್ರಯೋಗವನ್ನು ಪರಿಚಯಿಸಿದರು. ಇಜ್ಞಾನದ ಈ ಯೋಜನೆಯ ಅಂಗವಾಗಿ ಆವರ್ತ ಕೋಷ್ಟಕದ ಮೂಲವಸ್ತುಗಳನ್ನು ಕುರಿತ ಪುಸ್ತಕವೊಂದನ್ನು ಸರಳ ತಂತ್ರಾಂಶ ಸಾಧನಗಳ ಸಹಾಯದಿಂದಲೇ ರೂಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.