ADVERTISEMENT

ಕೊಚ್ಚಿ | ಖಾಸಗಿ ಉಗ್ರಾಣದಲ್ಲಿ ಭಾರಿ ಬೆಂಕಿ ಅನಾಹುತ: 9 ಕಾರ್ಮಿಕರ ರಕ್ಷಣೆ

ಪಿಟಿಐ
Published 1 ಡಿಸೆಂಬರ್ 2024, 4:39 IST
Last Updated 1 ಡಿಸೆಂಬರ್ 2024, 4:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಚ್ಚಿ: ಕೇರಳದ ಎರ್ನಾಕುಲಂ ಜಂಕ್ಷನ್‌ ರೈಲ್ವೆ ನಿಲ್ದಾಣದ ಬಳಿಯಿರುವ ಖಾಸಗಿ ಉಗ್ರಾಣದಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರ್ನಾಕುಲಂ ದಕ್ಷಿಣ ರೈಲ್ವೆ ಮೇಲ್ಸೇತುವೆ ಬಳಿಯ ಉಗ್ರಾಣದಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರತೆ ಹೆಚ್ಚಾಗಿದೆ. ಅವಘಡ ಸಂಭವಿಸಿದ ವೇಳೆ ಗೋದಾಮಿನಲ್ಲಿ ಸಿಲುಕಿದ್ದ ಒಂಬತ್ತು ಮಂದಿ ವಲಸೆ ಕಾರ್ಮಿಕರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಮೀಪದ ವಸತಿಗೃಹಗಳು ಹಾಗೂ ಮನೆಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವಘಡದ ಕುರಿತು ರಾತ್ರಿ ಗಸ್ತಿನಲ್ಲಿದ್ದ ನಗರ ಪೊಲೀಸರ ತಂಡ ನಮಗೆ ಮಾಹಿತಿ ನೀಡಿತ್ತು. ತಕ್ಷಣವೇ ಸ್ಥಳಕ್ಕೆ ಅನೇಕ ತಂಡಗಳನ್ನು ಕಳುಹಿಸಲಾಯಿತು. ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಘಟನೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಎರ್ನಾಕುಲಂ ದಕ್ಷಿಣ ರೈಲ್ವೆ ನಿಲ್ದಾಣ ಮತ್ತು ಆಲಪ್ಪುಳ ನಡುವಿನ ರೈಲು ಸೇವೆ ಎರಡು ಗಂಟೆಗಳ ಬಳಿಕ ಪುನರಾರಂಭಗೊಂಡಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೊಚ್ಚಿ ನಗರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.