ಪಂಜಾಬ್ ನ್ಯಾಷನಲ್ ಬ್ಯಾಂಕ್
ಮುಂಬೈ: ವಜ್ರದ ವ್ಯಾಪಾರಿಗಳಾದ ಮಾವ–ಅಳಿಯ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಜೋಡಿಯು ಬಹುದೊಡ್ಡ ಹಗರಣವೊಂದರ ಕಾರಣೀಕರ್ತರು. ಇವರಿಬ್ಬರು ಜೊತೆಯಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿದ್ದಾರೆ ಎನ್ನಲಾದ ಹಣದ ಮೊತ್ತ ₹13,800 ಕೋಟಿ.
ಇವರಿಬ್ಬರ ವಿರುದ್ಧವೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಹಾಗೂ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ಅಡಿಯಲ್ಲಿ ಇವರಿಬ್ಬರೂ ಪ್ರಕರಣ ಎದುರಿಸುತ್ತಿದ್ದಾರೆ.
ಕಳೆದ ಏಳು ವರ್ಷಗಳಿಂದ ಇಬ್ಬರೂ ದೇಶದ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿಲ್ಲ. ನೀರವ್ ಮೋದಿ ಲಂಡನ್ ಜೈಲಿನಲ್ಲಿ ಇದ್ದಾನೆ. ಆತನನ್ನು ಭಾರತಕ್ಕೆ ಕರೆತರುವುದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ. ಚೋಕ್ಸಿಯ ಬಂಧನ ಈಗ ಆಗಿದೆ.
ಚೋಕ್ಸಿ ಜನಿಸಿದ್ದು ಮುಂಬೈನಲ್ಲಿ, 1959ರಲ್ಲಿ. ಈತ ಶಿಕ್ಷಣ ಪಡೆದಿದ್ದು ಗುಜರಾತಿನಲ್ಲಿ. ಪ್ರೀತಿ ಎನ್ನುವವರನ್ನು ವಿವಾಹವಾಗಿರುವ ಚೋಕ್ಸಿ ಮೂರು ಮಕ್ಕಳ ತಂದೆ. ಚೋಕ್ಸಿ 2018ರ ಜನವರಿಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತ ತೊರೆದಿದ್ದ. ಈತನ ವಿರುದ್ಧ ಅದೇ ವರ್ಷದ ಜನವರಿ 31ರಂದು ಎಫ್‌ಐಆರ್ ದಾಖಲಾಗಿದೆ.
ವರದಿಗಳ ಪ್ರಕಾರ ಚೋಕ್ಸಿ ತನ್ನ ಪತ್ನಿಯ ಜೊತೆ ಬೆಲ್ಜಿಯಂನ ಆ್ಯಂಟ್‌ವರ್ಪ್ ಎಂಬಲ್ಲಿ ವಾಸವಾಗಿದ್ದ. ಈತನ ಪತ್ನಿ ಬೆಲ್ಜಿಯಂ ಪೌರತ್ವ ಹೊಂದಿದ್ದಾರೆ. ಕಳೆದ 18 ತಿಂಗಳಿಂದ ಅಲ್ಲಿ ವಾಸವಾಗಿರುವ ಈತ ಅಲ್ಲಿ ನೆಲಸಲು ಪರವಾನಗಿ ಪಡೆದ ಕ್ರಮದ ಬಗ್ಗೆ ಅನುಮಾನಗಳು ಇವೆ.
ಭಾರತದ ಷೇರುಪೇಟೆಯ ಮಹಾಗೂಳಿ ಎಂದೇ ಹೆಸರು ಸಂಪಾದಿಸಿದ್ದ ಹರ್ಷದ್ ಮೆಹ್ತಾ 1992ರಲ್ಲಿ ನಡೆಸಿದ ಹಗರಣದ ಮೊತ್ತಕ್ಕೆ ಹೋಲಿಸಿದರೆ ಚೋಕ್ಸಿ ನಡೆಸಿದ ಹಗರಣದ ಮೊತ್ತವು ಸರಿಸುಮಾರು ನಾಲ್ಕು ಪಟ್ಟು ಹೆಚ್ಚು.
ಚೋಕ್ಸಿ ನಡೆಸಿದ ಹಗರಣ ಬಯಲಿಗೆ ಬಂದ ನಂತರದಲ್ಲಿ ಆತನ ಗೀತಾಂಜಲಿ ಗ್ರೂಪ್ ಮತ್ತು ಫೈರ್‌ಸ್ಟೋನ್ ಗ್ರೂಪ್‌ನ ವಹಿವಾಟುಗಳು ಬಹುತೇಕ ಸ್ಥಗಿತಗೊಂಡಿವೆ. ಮಾವ–ಅಳಿಯನ ವೈಯಕ್ತಿಕ ಆಸ್ತಿಗಳನ್ನು ಹರಾಜು ಹಾಕಿ, ನಷ್ಟದ ಒಂದು ಪಾಲನ್ನು ಭರ್ತಿ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.