ಲಖನೌ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ಘೋಷಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮಾಡಿದ ಹಗರಣಗಳು ಬಹಿರಂಗಗೊಳ್ಳಲಿದೆ. ಜನರಿಗೆ ಸತ್ಯ ತಿಳಿಯಲಿದೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ. ನಾವು ಒಮ್ಮೆ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾನ್ನಾಗಿ ಮಾಡಲು ಬಯಸಿದ್ದೆವು. ಆದರೆ ಮುಖ್ಯಮಂತ್ರಿ ಸ್ಥಾನದಿಂದ ನಿವೃತ್ತಿ ಹೊಂದುವಂತೆ ಬಿಜೆಪಿಯವರು ಮಾಡುತ್ತಾರೆ ಎಂದು ಯಾದವ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷವು ಧಾರ್ಮಿಕ ಸಿದ್ಧಾಂತದಲ್ಲಿ ಬೂಟಾಟಿಕೆ ಹೊಂದಿದೆ. ಅನ್ಯಾಯ ಎಸಗುವವರು, ತಾರತಮ್ಯ ಮಾಡುವವರು ಮತ್ತು ಮಕ್ಕಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವವರು ತಮ್ಮನ್ನು ತಾವು ಸನಾತನಿಗಳೆಂದು ಕರೆದುಕೊಳ್ಳುವುದು ಸರಿಯಲ್ಲ ಎಂದು ಯಾದವ್ ಹೇಳಿದ್ದಾರೆ.
ಇಂದಿನ ರಾಜಕೀಯದಲ್ಲಿ ಕೇವಲ ಕೇಸರಿ ನಿಲುವಂಗಿ ಧರಿಸುವುದರಿಂದ ಒಬ್ಬರನ್ನು 'ಬಾಬಾ' ಅಥವಾ ಯೋಗಿ ಎಂದು ಕರೆಯಲಾಗುವುದಿಲ್ಲ. ನಿಜವಾಗಿ ಯೋಗಿ ಎಂದು ಕರೆಯುವುದು ಆತನ ಆಲೋಚನೆ ಮತ್ತು ನಡವಳಿಕೆಯಿಂದ ಮಾತ್ರ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ಯಾದವ್ ಕಿಡಿಕಾರಿದ್ದಾರೆ.
ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಂದ ಬಿಜೆಪಿಯು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ. 2027ರ ಉತ್ತರ ಪ್ರದೇಶ ಚುನಾವಣೆಯು ನೀವು ಹಿಂದೆಂದೂ ನೋಡಿರದ ಮತ್ತು ಯಾವುದೇ ಸಮೀಕ್ಷೆಗಳ ಫಲಿತಾಂಶಕ್ಕಿಂತ ಭಿನ್ನವಾಗಿರುತ್ತದೆ ಎಂದು ಯಾದವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.