ಪಟ್ನಾ: ‘ಪ್ರಸಕ್ತ ವರ್ಷ ಹೋಳಿ ಹಬ್ಬವು ರಂಜಾನ್ ಮಾಸದ ಶುಕ್ರವಾರ ಬಂದಿದ್ದು, ಹಿಂದೂಗಳಿಗೆ ಅಡೆತಡೆ ಎದುರಾಗದಂತೆ ಹಬ್ಬ ಆಚರಿಸಲು ಬಿಡಬೇಕು. ಅಂದು ಮುಸ್ಲಿಮರು ಮನೆಯೊಳಗಿದ್ದು ಸಹಕರಿಸಬೇಕು’ ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌರ್ ಹೇಳಿರುವುದು ವಿವಾದವಾಗಿದೆ.
ಮಧುಬನಿ ಜಿಲ್ಲೆಯ ಬಿಸ್ಫಿ ವಿಧಾನಸಭಾ ಕ್ಷೇತ್ರದ ಶಾಸಕ ಬಚೌರ್ ಅವರು ವಿಧಾನಸಭಾ ಆವರಣದಲ್ಲಿ ಸುದ್ದಿಗಾರರ ಜತೆ ಈ ಕುರಿತು ಸೋಮವಾರ ಮಾತನಾಡಿದ್ದಾರೆ.
‘ನಾನು ಮುಸ್ಲಿಮರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ವರ್ಷದಲ್ಲಿ 52 ಜುಮಾಗಳು (ಶುಕ್ರವಾರ) ಬರುತ್ತವೆ. ಈ ಬಾರಿ ಹೋಳಿ ಹಬ್ಬವೂ ಒಂದು ಶುಕ್ರವಾರ ಬಂದಿದೆ. ಅಂದು ಹಿಂದೂಗಳಿಗೆ ಹಬ್ಬ ಆಚರಿಸಲು ಬಿಡಿ. ಬಣ್ಣ ಬಿದ್ದರೆ ಕೋಪಗೊಳ್ಳಬೇಡಿ. ಒಂದು ವೇಳೆ ಇದರಿಂದ ನಿಮಗೇನಾದರೂ ತೊಂದರೆ ಆಗುತ್ತದೆ ಎನ್ನುವುದಾರೆ, ಅಂದು ಮನೆಯೊಳಗೆ ಇದ್ದುಬಿಡಿ. ಸಮುದಾಯಗಳ ನಡುವೆ ಸೌಹಾರ್ದ ಕಾಯ್ದುಕೊಳ್ಳಲು ಇದು ಅಗತ್ಯ’ ಎಂದು ಅವರು ಹೇಳಿದ್ದಾರೆ.
‘ಮುಸ್ಲಿಮರು ಯಾವಾಗಲೂ ಎರಡು ನೀತಿ ಹೊಂದಿರುತ್ತಾರೆ. ಒಂದೆಡೆ ಅವರು ಬಣ್ಣದ ಪುಡಿಗಳನ್ನು ಮಾರಿ ಹಣಗಳಿಸುವುದರಲ್ಲಿ ಸಂತೋಷ ಕಾಣುತ್ತಾರೆ, ಮತ್ತೊಂದೆಡೆ ತಮ್ಮ ಬಟ್ಟೆಯ ಮೇಲೆ ಬಣ್ಣದ ಕಲೆಗಳಾದರೆ ಕೋಪಗೊಳ್ಳುತ್ತಾರೆ’ ಎಂದು ಅವರು ದೂರಿದ್ದಾರೆ.
ಆರ್‌ಜೆಡಿ ಖಂಡನೆ: ಬಚೌರ್ ಹೇಳಿಕೆಯನ್ನು ಖಂಡಿಸಿರುವ ಆರ್‌ಜೆಡಿ ಶಾಸಕ ಇಸ್ರೇಲ್ ಮನ್ಸೂರಿ, ‘ಹಬ್ಬಗಳ ವಿಷಯ ಬಂದಾಗ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಂದೂಗಳು ಇಫ್ತಾರ್ ಕೂಟದಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಹೋಳಿ ಹಬ್ಬಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ಬಗ್ಗೆ ಬಿಜೆಪಿ ಶಾಸಕರು ಏಕೆ ಚಿಂತಿತರಾಗಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
‘ಈ ರೀತಿಯ ಜನರೇ ರಾಜಕೀಯಕ್ಕಾಗಿ ಮತೀಯ ಸಮಸ್ಯೆಗಳನ್ನು ತಂದೊಡ್ಡುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ, ‘ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಸಾಮರಸ್ಯವನ್ನು ಖಚಿತಪಡಿಸಿಕೊಳ್ಳುವಂತೆ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.