ADVERTISEMENT

Bihar Election: ಒಂದಂಕಿ ಸ್ಥಾನ ಪಡೆದು ತತ್ತರಿಸಿದ ಕಾಂಗ್ರೆಸ್‌ ಭವಿಷ್ಯವೇನು?

ಪಿಟಿಐ
Published 15 ನವೆಂಬರ್ 2025, 5:17 IST
Last Updated 15 ನವೆಂಬರ್ 2025, 5:17 IST
   

Bihar Result 2025: ಒಂದು ಕಾಲದಲ್ಲಿ ಬಿಹಾರವನ್ನು ಆಳಿದ್ದ ಕಾಂಗ್ರೆಸ್‌ ಪಕ್ಷವು ಈ ಚುನಾವಣೆಯಲ್ಲಿ ಒಂದಂಕಿ ಸ್ಥಾನಗಳನ್ನು ಪಡೆದು ತತ್ತರಿಸಿಹೋಗಿದೆ. ತಳ ಮಟ್ಟದಲ್ಲಿ ಆಮೂಲಾಗ್ರವಾಗಿ ಪಕ್ಷ ಸಂಘಟಿಸದಿದ್ದರೆ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷದ ಭವಿಷ್ಯ ಕಡುಕಠಿಣವಾಗಿರಲಿದೆ ಎಂದು ಎಂಬ ಸ್ಪಷ್ಟ ಸಂದೇಶವನ್ನು ಈ ಚುನಾವಣೆ ರವಾನಿಸಿದೆ. 

ದೇಶದ ಪ‍್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌, ಈಗ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಅಧಿಕಾರದಲ್ಲಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಪಕ್ಷವು ಆ ಬಳಿಕ ನಡೆದ 10 ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಎಲ್ಲಿಯೂ ಗೆದ್ದಿಲ್ಲ. ಎಂಟರಲ್ಲಿ ದಯನೀಯವಾಗಿ ಸೋತಿದೆ. ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ನಲ್ಲಿ ಗೆದ್ದಿರುವುದು ಮಿತ್ರ ಪಕ್ಷಗಳ ಊರುಗೋಲಿನ ನೆರವಿನಿಂದ.

ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಅವರ ‘ಸಂವಿಧಾನ ಉಳಿಸಿ’ ಕಸುವು ಕಳೆದುಕೊಂಡಿದೆ. ದೇಶದಾದ್ಯಂತ ಜಾತಿ ಗಣತಿ ನಡೆಸಬೇಕೆಂಬ ಅವರ ಹೋರಾಟ ಮತಗಳನ್ನು ತಂದುಕೊಟ್ಟಿಲ್ಲ. ಬಿಹಾರ ಚುನಾವಣೆಗೆ ಮುನ್ನ ಆರಂಭಿಸಿದ ‘ಮತ ಕಳವು’ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸಿದೆ ಅಷ್ಟೇ, ಮತಗಳಾಗಿ ಪರಿವರ್ತನೆಯಾಗಿಲ್ಲ. 

ADVERTISEMENT

ಬಿಹಾರದಲ್ಲಿ ಪಕ್ಷ ಪುನಶ್ಚೇತನಗೊಳಿಸಲು ರಾಹುಲ್ ಅವರು ಆಗಸ್ಟ್ ತಿಂಗಳಲ್ಲಿ ಮತ ಅಧಿಕಾರ ಯಾತ್ರೆ ನಡೆಸಿ ಸಂಚಲನ ಸೃಷ್ಟಿಸಿದರು. ನಾಯಕರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಆ ಬಳಿಕ ವಿದೇಶ ಯಾತ್ರೆಗಳಲ್ಲಿ ತಲ್ಲೀನರಾದರು. ಸೀಟು ಹಂಚಿಕೆ ಸಂದರ್ಭದಲ್ಲಿ ಮೈತ್ರಿಕೂಟದ ನಾಯಕರ ಕೈಗೇ ಸಿಗಲಿಲ್ಲ. ಮತ್ತೆ ಬಿಹಾರದತ್ತ ಮುಖ ಮಾಡಿದ್ದು ಮೊದಲ ಹಂತದ ಮತದಾನಕ್ಕೆ ಒಂದು ವಾರ ಇರುವಾಗ. ಪುರುಸೊತ್ತು ಇದ್ದಾಗ ರಾಜಕಾರಣ ಮಾಡುವ ಇಂತಹ ಧೋರಣೆ ಕಾಂಗ್ರೆಸ್‌ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಅಪ್ರಸ್ತುತಗೊಳಿಸಬಹುದು. ಪಕ್ಷದ ಪುನಶ್ಚೇತನದ ಮೇಲೆ ಅದು ಕರಿ ಛಾಯೆ ಬೀರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.