ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಫ್ರೆಂಡ್ಲಿ ಫೈಟ್’ ಅನ್ನು ಕಡಿಮೆ ಮಾಡಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಮಾತುಕತೆ ಮುಂದುವರಿಸಿವೆ.
ಹಲವು ಸುತ್ತುಗಳ ಮಾತುಕತೆ ನಡೆದರೂ ವಿಪಕ್ಷಗಳ ಮೈತ್ರಿಕೂಟದಲ್ಲಿ ಅಧಿಕೃತವಾಗಿ ಸೀಟು ಹಂಚಿಕೆ ಒಪ್ಪಂದ ಏರ್ಪಟ್ಟಿಲ್ಲ. ಇದರಿಂದ ಕನಿಷ್ಠ ಒಂಬತ್ತು ಕ್ಷೇತ್ರಗಳಲ್ಲಿ ಮೈತ್ರಿ ಕೂಟದ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ. ಇದೀಗ, ಪರಸ್ಪರ ಪೈಪೋಟಿಯನ್ನು ಇನ್ನಷ್ಟು ತಗ್ಗಿಸುವ ಪ್ರಯತ್ನ ನಡೆಯುತ್ತಿದ್ದು, ಅಲ್ಪ ಯಶಸ್ಸು ಲಭಿಸಿದೆ.
ಲಾಲ್‌ಗಂಜ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಿತ್ಯ ರಾಜ ಅವರು ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. ಇಲ್ಲಿ ‘ಇಂಡಿಯಾ’ ಅಭ್ಯರ್ಥಿಯಾಗಿ ಆರ್‌ಜೆಡಿಯ ಶಿವಾನಿ ಶುಕ್ಲಾ ಕಣದಲ್ಲಿದ್ದಾರೆ. ಇದರಿಂದ ಕಾಂಗ್ರೆಸ್–ಆರ್‌ಜೆಡಿ ಪರಸ್ಪರ ಪೈಪೋಟಿ ನಡೆಸುವ ಕ್ಷೇತ್ರಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ.
ಕಾಂಗ್ರೆಸ್ ಮತ್ತು ಎಡಪಕ್ಷಗಳು ನಾಲ್ಕು ಕ್ಷೇತ್ರಗಳಲ್ಲಿ ಪರಸ್ಪರ ಎದುರಾಗುತ್ತಿವೆ. ಇದರಲ್ಲಿ ಕಾಂಗ್ರೆಸ್ ಕನಿಷ್ಠ ಒಂದು ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದು ಎಂದು ಸಿಪಿಐ ನಿರೀಕ್ಷಿಸುತ್ತಿದೆ. ಬಚ್ವಾರ, ರಾಜ್‌ಪಕರ್, ಬಿಹಾರ್ ಷರೀಫ್ ಮತ್ತು ಕರಗ್‌ಹರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್– ಎಡಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.