ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ಬಿಹಾರ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ಗೈರಾಗಿದ್ದ ಕಾರಣಕ್ಕೆ ಮುಜರಾಯಿ ಇಲಾಖೆ ಆಯುಕ್ತ ಎಂ.ವಿ. ವೆಂಕಟೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಪ್ರಕರಣ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲೇ (ಸಿಎಟಿ) ಇತ್ಯರ್ಥವಾಗಲಿ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದ ಸಿಎಟಿ ಕ್ರಮವನ್ನು ಪ್ರಶ್ನಿಸಿ ಎಂ.ವಿ.ವೆಂಕಟೇಶ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈಗಾಗಲೇ ಪ್ರಕರಣದ ವಿಚಾರಣೆ ನಡೆಸಿರುವ ಸಿಎಟಿ, ಅರ್ಜಿದಾರರ ಮನವಿ ಪರಿಗಣಿಸಲಾಗುವುದು ಎಂದು ನವೆಂಬರ್ 4ರ ಆದೇಶದಲ್ಲಿ ತಿಳಿಸಿದೆ. ಹೀಗಿರುವಾಗ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಕಾಣಿಸುತ್ತಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ‘ಪ್ರಕರಣವನ್ನು ಸಿಎಟಿಯೇ ಪರಿಶೀಲಿಸಲಿ. ಅರ್ಜಿದಾರರು ತಮ್ಮ ವಾದ, ಸಮರ್ಥನೆ, ಆಕ್ಷೇಪಣೆಗಳೇನೇ ಇದ್ದರೂ ಸಿಎಟಿ ಮುಂದೆಯೇ ಮಂಡಿಸಲಿ’ ಎಂದು ಹೇಳಿ ಅರ್ಜಿ ವಿಲೇವಾರಿ ಮಾಡಿತು.
ಬಿಹಾರ ಚುನಾವಣೆಯ ಸಾಮಾನ್ಯ ವೀಕ್ಷಕರನ್ನಾಗಿ ಎಂ.ವಿ.ವೆಂಕಟೇಶ್ ಅವರನ್ನು ನಿಯೋಜಿಸಲಾಗಿತ್ತು. ಅವರು ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ, ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಅಕ್ಟೋಬರ್ 30ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.