ADVERTISEMENT

Bihar Election| ಬಿಹಾರಿ ಆಗಿರುವುದು ಹೆಮ್ಮೆಯ ಸಂಗತಿ: ನಿತೀಶ್‌ ಕುಮಾರ್‌

ಪಿಟಿಐ
Published 1 ನವೆಂಬರ್ 2025, 6:42 IST
Last Updated 1 ನವೆಂಬರ್ 2025, 6:42 IST
   

ಪಟ್ನಾ: ಬಿಹಾರ ರಾಜ್ಯವು ಅಭಿವೃದ್ದಿಯ ಕಡೆಗೆ ಸಾಗುತ್ತಿದ್ದು, ಬಿಹಾರಿಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ಹೇಳಿದ್ದಾರೆ.

ಜೆಡಿ(ಯು) ಪಕ್ಷದ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ನಿತೀಶ್‌ ಕುಮಾರ್‌ ಮಾತನಾಡಿದ್ದಾರೆ.

‘ನಾನು ನನ್ನ ಕುಟುಂಬಕ್ಕಿಂತ, ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ರಾಜ್ಯದಲ್ಲಿ ನಾನು ಅಧಿಕಾರಕ್ಕೆ ಬರುವ ಮೊದಲು ಜಂಗಲ್‌ ರಾಜ್‌ ಆಡಳಿತವಿರುವುದು ಜನರಿಗೆ ತಿಳಿದಿದೆ. ನಾನು 2005ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಕಾಪಾಡಲು ಒತ್ತು ನೀಡಿದ್ದು, ಇದೀಗ ಗಣನೀಯ ಬದಲಾವಣೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಮೇಲ್ವರ್ಗ, ದಲಿತರು ಸೇರಿದಂತೆ ಎಲ್ಲಾ ಜಾತಿ – ಧರ್ಮಗಳ ಬಡವರ ಏಳಿಗೆಗಾಗಿ ಶ್ರಮಿಸಿದ್ದೇವೆ. ರೈತರು, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದ ಜನರು 2005ರಿಂದ ಅಧಿಕಾರ ನೀಡಿದ್ದು, ಬಿಹಾರದ ಸಮಗ್ರ ಬೆಳವಣಿಗೆಗಾಗಿ ಹಲವು ಕ್ರಮಗಳನ್ನು ರೂಪಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದು, ಬಿಹಾರದ ಅಭಿವೃದ್ದಿಗೆ ವೇಗ ದೊರಕಿದೆ. ಇದು ಮುಂದೆಯೂ ಮುಂದುವರಿಯಲಿದ್ದು, ರಾಜ್ಯದ ಅಭಿವೃದ್ದಿಗಾಗಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಎನ್‌ಡಿಎ ಬಣಕ್ಕೆ ಮತ ಚಲಾಯಿಸುವಂತೆ ಅವರು ಜನರ ಬಳಿ ಮನವಿ ಮಾಡಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನ.6 ಹಾಗೂ ನ.11 ರಂದು ಚುನಾವಣೆ ನಡೆಯಲಿದೆ. ನ.14 ರಂದು ಫಲಿತಾಂಶ ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.