
ನವಾಡಾ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ನವಾಡಾ ಜಿಲ್ಲೆಯ ವಾರಿಸಲಿಗಂಜ್‌ನ ಮತಗಟ್ಟೆಯ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.
‘ಮತಗಟ್ಟೆಯಿಂದ 1.5 ಕಿ.ಮೀ ದೂರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಭದ್ರತಾ ಪಡೆಗಳು ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮತದಾನವು ಸರಾಗವಾಗಿ ನಡೆಯುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧೀಮನ್ ತಿಳಿಸಿದ್ದಾರೆ.
ಘಟನೆಯ ವೇಳೆ ಚುನಾವಣೆಗೆ ನಿಯೋಜಿಸಲಾಗಿದ್ದ ಸರ್ಕಾರಿ ವಾಹನವು ಹಾನಿಗೊಳಗಾಗಿದೆ ಎನ್ನುವುದು ಸುಳ್ಳು ಸುದ್ದಿಯಾಗಿದ್ದು, ಖಾಸಗಿ ವಾಹನವೊಂದಕ್ಕೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕರ್ತರ ನಡುವಿನ ಘರ್ಷಣೆಯದ್ದು ಎನ್ನಲಾದ ವಿಡಿಯೊ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ, ನಿರ್ದಿಷ್ಟ ಪಕ್ಷವೊಂದಕ್ಕೆ ಮತ ಚಲಾವಣೆ ಮಾಡದೇ ಇರುವುದಕ್ಕೆ ನನಗೆ ತಳಿಸಲಾಗಿದೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ.
ಬಿಹಾರದ 122 ವಿಧಾನಸಭಾ ಕ್ಷೇತ್ರಗಳಿಗೆ ಇಂದು(ಮಂಗಳವಾರ) ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ 31.38 ರಷ್ಟು ಮತದಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.