
ಬೆಗೂಸರಾಯ್ (ಬಿಹಾರ): ಬಿಹಾರದ ಬೆಗೂಸರಾಯ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಅಲ್ಲಿನ ಸ್ಥಳೀಯ ಮೀನುಗಾರರ ಜೊತೆ ಸಂವಾದ ನಡೆಸಿದ್ದಾರೆ.
ಈ ವೇಳೆ ಮೀನುಗಾರರ ಜೊತೆಯಲ್ಲಿಯೇ ಕೆರೆಗಿಳಿದ ರಾಹುಲ್, ಮೀನು ಹಿಡಿಯುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಾಹುಲ್ ಅವರೊಂದಿಗೆ ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮತ್ತು ‘ಮಹಾಘಟಬಂಧನ’ ಉಪಮುಖ್ಯಮಂತ್ರಿ ಅಭ್ಯರ್ಥಿ ಮುಖೇಶ್ ಸಹಾನಿ ಕೂಡ ಇದ್ದರು.
ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮೀನುಗಾರರಿಗೆ ನೀಡಿದ ಭರವಸೆಗಳ ಬಗ್ಗೆ ರಾಹುಲ್ ತಿಳಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಮೀನುಗಾರರ ಕುಟುಂಬಕ್ಕೆ ₹5 ಸಾವಿರ ನೆರವು ನೀಡುವುದು, ಮೀನುಗಾರರಿಗೆ ವಿಮಾ ಯೋಜನೆ ಮತ್ತು ನದಿ, ಕೆರೆಗಳ ಪುನರುಜ್ಜೀವನದ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸುವುದಾಗಿ ಹೇಳಿದ್ದಾರೆ.
‘ಮೀನುಗಾರಿಕೆ ಆಸಕ್ತಿದಾಯಕವಾಗಿ ಕಂಡರೂ, ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಹಾರದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಮೀನುಗಾರ ಸಮುದಾಯದ ಜೊತೆ ಸಂವಾದ ನಡೆಸುವ ಅವಕಾಶ ದೊರೆತಿದೆ’ ಎಂದು ರಾಹುಲ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ಮತ್ತು ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಕೆಲಸಕ್ಕಾಗಿ ಬಿಹಾರದ ಜನರು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಕಷ್ಟಪಟ್ಟು ದುಡಿಯುವ ಬಿಹಾರಿಗಳು ಆ ರಾಜ್ಯದ ಅಭಿವೃದ್ದಿಗೆ ಕೊಡುಗೆ ನೀಡುತ್ತಿದ್ದಾರೆ. ಬೆವರು ಸುರಿಸಿ ದುಬೈನಂತಹ ಮಹಾ ನಗರವನ್ನೇ ನಿರ್ಮಿಸಿರುವ ಅವರಿಗೆ ಬಿಹಾರವನ್ನು ನಿರ್ಮಿಸಲು ಸಾಧ್ಯವಾಗಿಲ್ಲವೇಕೆ?’ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಹಿಂದುಳಿದ ವರ್ಗಗಳು, ವಂಚಿತ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ವಿಶೇಷ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ. ಅದನ್ನು ಜಾರಿಗೆ ತಂದೇ ತರುತ್ತೇವೆ. ಆ ಮೂಲಕ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.