ADVERTISEMENT

ಬಿಹಾರ ಚುನಾವಣೆ ಫಲಿತಾಂಶ: 2015–2020ರ ನಡುವೆ ‘ನೋಟಾ’ ಮತ ಹಂಚಿಕೆ ಬದಲಾದ ಬಗೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 10:15 IST
Last Updated 10 ನವೆಂಬರ್ 2020, 10:15 IST
ಪಟ್ನಾದಲ್ಲಿ ಬಿಜೆಪಿ ಬೆಂಬಲಿಗರ ಸಂಭ್ರಮಾಚರಣೆ – ಪಿಟಿಐ ಚಿತ್ರ
ಪಟ್ನಾದಲ್ಲಿ ಬಿಜೆಪಿ ಬೆಂಬಲಿಗರ ಸಂಭ್ರಮಾಚರಣೆ – ಪಿಟಿಐ ಚಿತ್ರ   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಮೈತ್ರಿಕೂಟಗಳ ನಡುವೆ ಪೈಪೋಟಿ ನಡೆದಿದೆ. ಮೂರು ಹಂತಗಳ ಚುನಾವಣೆಯಲ್ಲಿ ತಾರಾ ಪ್ರಚಾರಕರು ಮತ ಸೆಳೆಯಲು ಯತ್ನಿಸಿದ್ದರೆ ಮತದಾರರ ಸಣ್ಣ ಗುಂಪೊಂದು ಮತ್ತೊಂದು ಆಯ್ಕೆಯಾದ ‘ಮೇಲಿನ ಯಾವುದೂ ಅಲ್ಲ (ನೋಟಾ)’ ಇದಕ್ಕೆ ಮತ ಚಲಾಯಿಸಿದ್ದಾರೆ.

ಬಿಹಾರದಲ್ಲಿ 2015ರಲ್ಲಿ ಮೊದಲ ಬಾರಿಗೆ ಮತದಾರರಿಗೆ ‘ನೋಟಾ’ ಆಯ್ಕೆ ನೀಡಲಾಗಿತ್ತು. ಆಗ ಒಟ್ಟು ಚಲಾವಣೆಯಾದ 3,81,20,124 ಮತಗಳ ಪೈಕಿ 9,47,279 ‘ನೋಟಾ’ಗೆ ಚಲಾವಣೆಯಾಗಿದ್ದವು. ‘ನೋಟಾ’ ಮತಹಂಚಿಕೆ ಪ್ರಮಾಣ ಶೆ 2.48ರಷ್ಟಿತ್ತು.

2020ರ ವಿಧಾನಸಭಾ ಚುನಾವಣೆಯಲ್ಲಿ ‘ನೋಟಾ’ ಪರ ಅತಿ ಕಡಿಮೆ, ಅಂದರೆ 1.8 ಲಕ್ಷ ಮತಗಳು ಚಲಾವಣೆಯಾಗಿವೆ. ‘ನೋಟಾ’ ಮತಹಂಚಿಕೆ ಪ್ರಮಾಣ ಶೇ 1.8ರಷ್ಟಿದೆ. ಮತ ಎಣಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಂತಿಮ ಫಲಿತಾಂಶ ಪ್ರಕಟವಾಗುವ ವೇಳೆ ಇದು ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ನೀಡಲು ಇಚ್ಛಿಸದ ಮತದಾರರಿಗಾಗಿ ‘ನೋಟಾ’ ಆಯ್ಕೆ ನೀಡಲಾಗಿದೆ. ‘ನೋಟಾ’ ಪರಿಕಲ್ಪನೆಯನ್ನು 2009ರಲ್ಲಿ ಪರಿಚಯಿಸಲಾಗಿತ್ತಾದರೂ ಮೊದಲು ಅನುಷ್ಠಾನಗೊಳಿಸಿದ್ದು 2013ರ ಮಿಜೋರಾಂ, ಛತ್ತೀಸಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ.

ನಿರ್ದಿಷ್ಟ ಸ್ಥಾನ ಅಥವಾ ಕ್ಷೇತ್ರದಲ್ಲಿ ‘ನೋಟಾ’ ಆಯ್ಕೆಯು ಅತಿ ಹೆಚ್ಚು ಮತಗಳನ್ನು ಪಡೆದರೆ, ಅಲ್ಲಿ ಚುನಾವಣೆ ಅಮಾನ್ಯವಾಗುವುದಿಲ್ಲ. ಬದಲಿಗೆ ನಂತರದ ಅತಿಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಕಾರಣಕ್ಕಾಗಿ ಈ ಬಾರಿ ‘ನೋಟಾ’ ಪರ ಕಡಿಮೆ ಮತ ಚಲಾವಣೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.