ADVERTISEMENT

ಬಿಹಾರ ಚುನಾವಣೆ: ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 8:06 IST
Last Updated 23 ಅಕ್ಟೋಬರ್ 2025, 8:06 IST
<div class="paragraphs"><p>ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ</p></div>

ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ

   

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ವಿಕಾಸಶೀಲ ಇನ್ಸಾನ್‌ ಪಕ್ಷದ (ವಿಐಪಿ) ಮುಖ್ಯಸ್ಥ ಮುಕೇಶ್‌ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ‘ಇಂಡಿಯಾ’ ಕೂಟ ಗುರುವಾರ ಘೋಷಿಸಿದೆ. ಈ ಮೂಲಕ, ಕೊನೆಗೂ ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ಮಹಾಮೈತ್ರಿಕೂಟ ಒಮ್ಮತಕ್ಕೆ ಬಂದಿದೆ. 

ಆರ್‌ಜೆಡಿಯೊಂದಿಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬುಧವಾರದಿಂದ ಪಟ್ನಾದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಗೆಹಲೋತ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ಈ ನಿರ್ಧಾರಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ ಎಂದೂ ತಿಳಿಸಿದರು. 

ADVERTISEMENT

‘ಖರ್ಗೆ ಹಾಗೂ ರಾಹುಲ್ ಅವರೊಂದಿಗೆ ಸಮಾಲೋಚಿಸಿ ಹಾಗೂ ಮೈತ್ರಿ ಪಾಲುದಾರರೊಂದಿಗೆ ಚರ್ಚಿಸಿ ತೇಜಸ್ವಿ ಅವರನ್ನು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಬಿಹಾರದ ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಹಾನಿ ಹೆಸರನ್ನು ಘೋಷಿಸಲಾಗಿದೆ. ಇನ್ನೊಬ್ಬ ಉಪಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು’ ಎಂದರು. 

ಈ ನಡುವೆ, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದಲಿತ ಅಥವಾ ಮುಸ್ಲಿಂ ನಾಯಕರೊಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ರಾಜ್ಯ ಕಾಂಗ್ರೆಸ್‌ನ ಗುಂಪೊಂದು ಒತ್ತಾಯಿಸಿದೆ. 

ಗೊಂದಲ ನಿವಾರಿಸುವ ಪ್ರಯತ್ನ: 

ತೇಜಸ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಚುನಾವಣೆ ಎದುರಿಸುವುದು ಕಾಂಗ್ರೆಸ್‌ಗೆ ಸುತಾರಾಂ ಇಷ್ಟವಿರಲಿಲ್ಲ. ರಾಹುಲ್‌ ಗಾಂಧಿ ಅವರ ಮತ ಅಧಿಕಾರ ಯಾತ್ರೆಯಲ್ಲೂ ಈ ಬಗ್ಗೆ ಪರೋಕ್ಷ ಸಂದೇಶ ರವಾನಿಸಲಾಗಿತ್ತು. ಈ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಕಾಂಗ್ರೆಸ್‌ ನಾಯಕರು ಆರ್‌ಜೆಡಿ ನಾಯಕರಿಗೆ ಸ್ಪಷ್ಟಪಡಿಸಿದ್ದರು. ಇದರಿಂದ ಆರ್‌ಜೆಡಿ ನಾಯಕರು ಕೆರಳಿದ್ದರು.

ಸೀಟು ಹಂಚಿಕೆ ಕಗ್ಗಂಟು ಉಂಟಾಗಲು ಈ ಮನಸ್ತಾಪವೂ ಪ್ರಮುಖ ಕಾರಣ. ಈ ಬಿಕ್ಕಟ್ಟು ಬಗೆಹರಿಸುವ ಹೊಣೆಯನ್ನು ಗೆಹಲೋತ್ ಅವರಿಗೆ ಪಕ್ಷ ವಹಿಸಿತು. ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಹಾಗೂ ತೇಜಸ್ವಿ ಯಾದವ್‌ ಅವರೊಂದಿಗೆ ಗೆಹಲೋತ್‌ ಸಂಧಾನ ಸಭೆಗಳನ್ನು ನಡೆಸಿದ ಬಳಿಕ ಸಿಎಂ ಹಾಗೂ ಡಿಸಿಎಂ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಈ ಮೂಲಕ, ಮೈತ್ರಿಯ ಗೊಂದಲ ನಿವಾರಿಸುವ ಪ್ರಯತ್ನ ಮಾಡಲಾಗಿದೆ. 

2020ರ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಕೂಟವು ಎನ್‌ಡಿಎಗಿಂತ 12,700 ಕಡಿಮೆ ಮತಗಳನ್ನು ಪಡೆದಿತ್ತು. ಈ ಸಲ ಸಣ್ಣ ಪಕ್ಷ ಹಾಗೂ ಸಮುದಾಯಗಳಿಗೆ ಮೈತ್ರಿಕೂಟ ಆದ್ಯತೆ ನೀಡಿದೆ. ಜಾತಿ ಹಾಗೂ ಸಮುದಾಯಗಳಿಗೆ ಹೆಚ್ಚಿನ ಉಪಮುಖ್ಯಮಂತ್ರಿಗಳು ಇರುತ್ತಾರೆ ಎಂಬ ಸಂದೇಶದೊಂದಿಗೆ ಒಗ್ಗಟ್ಟು ಪ್ರದರ್ಶನ ಹಾಗೂ ಇಂಡಿಯಾ ಇನ್‌ಕ್ಲೂಸಿವ್‌ ಪಾರ್ಟಿಗಳಂತ ಹೊಸ ಪಕ್ಷಗಳ ಸೇರ್ಪಡೆಯಿಂದ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಬಹುದು ಎಂಬುದು ಮೈತ್ರಿಕೂಟದ ಲೆಕ್ಕಾಚಾರ. 

ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬಳಿಕ ಮೈತ್ರಿಕೂಟದ ನಾಯಕರು ಮೊದಲ ಬಾರಿಗೆ ಒಗ್ಗಟ್ಟು ಪ್ರದರ್ಶಿಸಿದರು. ಆದರೆ, 10 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ‘ಫ್ರೆಂಡ್ಲಿ ಫೈಟ್‌’ಗೆ ಅಣಿಯಾಗಿದ್ದಾರೆ. ‘ಮೈತ್ರಿಕೂಟದಲ್ಲಿ ಶೇ 1–2ರಷ್ಟು ಗೊಂದಲ ಸಾಮಾನ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಂದಾಣಿಕೆ ಏರ್ಪಡಲಿದೆ’ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಶೇ 9–10ರಷ್ಟಿರುವ ನಿಶಾದ್‌ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತು. 2020ರಲ್ಲಿ ಮೈತ್ರಿಕೂಟದಿಂದ ಹೊರನಡೆದಿದ್ದ ಸಹಾನಿ ಅವರ ಬಗ್ಗೆ ಆರ್‌ಜೆಡಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ನಾಯಕರ ಮನವೊಲಿಕೆ ಬಳಿಕ ಮಣಿದರು ಎಂದು ಮೂಲಗಳು ತಿಳಿಸಿವೆ. 

60 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ವಿಐಪಿ ಪಟ್ಟು ಹಿಡಿದಿತ್ತು. 15 ಕ್ಷೇತ್ರಗಳನ್ನಷ್ಟೇ ನೀಡಲು ಆರ್‌ಜೆಡಿ ಒಪ್ಪಿತ್ತು. ಸಿಪಿಐ (ಎಂಎಲ್‌) ಎಲ್‌ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಹಾಗೂ ರಾಹುಲ್‌ ಗಾಂಧಿ ಮಧ್ಯಪ್ರವೇಶದ ಬಳಿಕ ಮೈತ್ರಿಕೂಟದಲ್ಲಿ ಉಳಿಯಲು ವಿಐಪಿ ನಾಯಕರು ಒಪ್ಪಿದ್ದರು. ಸಹಾನಿ ಕೂಡ ಏಕೈಕ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಲು ಬಯಸಿದ್ದರು. ಆದರೆ, ಮೈತ್ರಿಕೂಟ ಅದಕ್ಕೆ ಮಣಿದಿಲ್ಲ.

ಲಾಲೂ ಅವರ ಪಕ್ಷವು ಯಾದವ–ಮುಸ್ಲಿಂ ಮತ ಬ್ಯಾಂಕ್ ಅನ್ನು ಬಹುವಾಗಿ ನೆಚ್ಚಿಕೊಂಡಿದೆ. ಎನ್‌ಡಿಎ ಮೈತ್ರಿಕೂಟವು ಕುರ್ಮಿ–ಪ್ರಬಲ ಜಾತಿಗಳ ಮತಗಳ ನೆರವಿನಿಂದ ಗೆದ್ದು ಬರುತ್ತಿದೆ. ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಮೂಲಕ ಅತಿ ಹಿಂದುಳಿದ ವರ್ಗಗಳಿಗೆ (ಇಬಿಸಿ) ಪ್ರಾಧಾನ್ಯ ನೀಡಲಾಗಿದೆ. ರಾಜ್ಯದಲ್ಲಿ ಇಬಿಸಿಗಳು ಶೇ 36ರಷ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.