ADVERTISEMENT

ಬಿಹಾರ ಚುನಾವಣೆ:ಸೀಟು ಹಂಚಿಕೆಗೆ ಮುನ್ನವೇ ತೇಜಸ್ವಿ ಮತ್ತಿತರರು ನಾಮಪತ್ರ ಸಲ್ಲಿಕೆ

ಬಿಹಾರ ಚುನಾವಣೆ: ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 16:55 IST
Last Updated 15 ಅಕ್ಟೋಬರ್ 2025, 16:55 IST
<div class="paragraphs"><p>ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ</p></div>

ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ

   

ನವದೆಹಲಿ: ಬಿಹಾರ ವಿಧಾನಸಭೆಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 121 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಅವಧಿ ಕೊನೆಗೊಳ್ಳಲು ಎರಡು ದಿನಗಳಷ್ಟೇ ಉಳಿದಿವೆ. ಆದರೆ, ‘ಇಂಡಿಯಾ‘ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಬುಧವಾರವೂ ಒಮ್ಮತಾಭಿಪ್ರಾಯ ಮೂಡಲಿಲ್ಲ. 

ಈ ನಡುವೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಸೇರಿದಂತೆ ಮೈತ್ರಿಕೂಟದ ಕೆಲವು ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು. ಮಿತ್ರ ಪಕ್ಷಗಳ ನಡುವೆ ಯಾವುದೇ ಪೈಪೋಟಿ ಇಲ್ಲದ ಕ್ಷೇತ್ರಗಳಲ್ಲಷ್ಟೇ ನಾಮಪತ್ರ ಸಲ್ಲಿಕೆಯಾಗಿದೆ. 

ADVERTISEMENT

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ನೇಮಿಸಿದ ಉಪಸಮಿತಿಯು ಸುಮಾರು ಹತ್ತು ಸ್ಥಾನಗಳಿಗೆ ಅಭ್ಯರ್ಥಿಗಳ ಆಖೈರುಗೊಳಿಸುವ ಬಗ್ಗೆ ನಡೆಸಿತು. ಪಕ್ಷವು ಇಲ್ಲಿಯವರೆಗೆ ಸುಮಾರು 75 ಹೆಸರುಗಳಿಗೆ ಹಸಿರು ನಿಶಾನೆ ತೋರಿಸಿದೆ. ಆದರೆ, ಸೀಟು ಹಂಚಿಕೆ ಕುರಿತು ಆರ್‌ಜೆಡಿಯೊಂದಿಗೆ ಅಂತಿಮ ಚರ್ಚೆಗಳ ನಂತರ ಸುಮಾರು 60 ಸ್ಥಾನಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಿಹಾರ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಸೇರಿದಂತೆ ಹಿರಿಯ ನಾಯಕರು ಬುಧವಾರ ಮಧ್ಯಾಹ್ನ ಪಟ್ನಾಕ್ಕೆ ಹಿಂತಿರುಗಿದರು. ಕ್ಷೇತ್ರಗಳ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. ‘ಪಕ್ಷಕ್ಕೆ 70 ಸ್ಥಾನಗಳನ್ನು ಬಿಟ್ಟುಕೊಡಬೇಕು’ ಎಂದು ಕಾಂಗ್ರೆಸ್‌ ‍ಪಟ್ಟು ಹಿಡಿದಿತ್ತು. ಆದರೆ, 60ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಆರ್‌ಜೆಡಿ ಒಪ್ಪಿರಲಿಲ್ಲ. ಪಕ್ಷಕ್ಕೆ 58–60 ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಆದರೆ, ಇದೀಗ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲು ಉಭಯ ಪಕ್ಷಗಳು ಒಪ್ಪಿಲ್ಲ. ಹೀಗಾಗಿ, ಕಗ್ಗಂಟು ಮುಂದುವರಿದಿದೆ. 

ಕೆಹಲ್‌ಗಾವ್‌, ವೈಶಾಲಿ ಮತ್ತು ನರ್ಕಟಗಂಜ್‌ಗಾಗಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಪೈಪೋಟಿ ನಡೆಸುತ್ತಿದ್ದು, ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಉಭಯ ಪಕ್ಷಗಳು ಸಿದ್ಧ ಇಲ್ಲ. ಮುಖೇಶ್ ಸಹಾನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ ಸುಮಾರು 17-18 ಸ್ಥಾನಗಳನ್ನು ನೀಡಲು ಸಹಮತಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಪಿಐ(ಎಂ)ಎಲ್‌ಗೆ 19 ಕ್ಷೇತ್ರಗಳನ್ನು ನೀಡಲು ಆರ್‌ಜೆಡಿ ಒಪ್ಪಿಗೆ ಸೂಚಿಸಿತ್ತು. ಈ ಪೈಕಿ 18 ಕ್ಷೇತ್ರಗಳಿಗೆ ಸಿಪಿಐ(ಎಂ)ಎಲ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆರಂಭಿಸಿದ್ದಾರೆ. ಎಡ ಪಕ್ಷಗಳು ಕನಿಷ್ಠ 30 ಕ್ಷೇತ್ರಗಳನ್ನು ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದವು. ಈ ಪ್ರಸ್ತಾವವನ್ನು ಆರ್‌ಜೆಡಿ ತಿರಸ್ಕರಿಸಿತ್ತು. ಇನ್ನೂ 3–4 ಕ್ಷೇತ್ರಗಳನ್ನು ಕೊಡಬೇಕು ಎಂದು ಎಡ ಪಕ್ಷಗಳು ಹಠ ಹಿಡಿದಿವೆ. ಎಲ್‌ಜೆಪಿ (ಪರಾಸ್‌), ಜೆಎಂಎಂನಂತಹ ಸಣ್ಣ ಪಕ್ಷಗಳಿಗೆ ಕೆಲವೊಂದು ಕ್ಷೇತ್ರಗಳನ್ನು ನೀಡಬೇಕಿದ್ದು, ಉಳಿದ ಪಕ್ಷಗಳು ಸಹಕಾರ ನೀಡಬೇಕು ಎಂದು ಆರ್‌ಜೆಡಿ ನಾಯಕರು ಮಿತ್ರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.