ADVERTISEMENT

ಬಿಹಾರ ಚುನಾವಣೆ | ಮೋದಿ ಸರ್ಕಾರದ ಅಂತ್ಯಕ್ಕೆ ಮುನ್ನುಡಿ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 24 ಸೆಪ್ಟೆಂಬರ್ 2025, 16:12 IST
Last Updated 24 ಸೆಪ್ಟೆಂಬರ್ 2025, 16:12 IST
<div class="paragraphs"><p>ಪಟ್ನಾದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಭಾಗವಹಿಸಿದ್ದರು </p></div>

ಪಟ್ನಾದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಭಾಗವಹಿಸಿದ್ದರು

   

–ಪಿಟಿಐ ಚಿತ್ರ

ಪಟ್ನಾ: ‘ಮತಕಳವು’ ಮತ್ತು ಕೋಮು ಧ್ರುವೀಕರಣದಲ್ಲಿ ತೊಡಗಿರುವ ಬಿಜೆಪಿಗೆ ಬಿಹಾರ ವಿಧಾನಸಭಾ ಚುನಾವಣೆ ತಕ್ಕ ಪಾಠ ಕಲಿಸಲಿದ್ದು, ಮೋದಿ ಸರ್ಕಾರದ ಭ್ರಷ್ಟ ಆಡಳಿತದ ಅಂತ್ಯಕ್ಕೆ ಮುನ್ನಡಿ ಬರೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪ್ರತಿಪಾದಿಸಿದರು.

ADVERTISEMENT

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಮಾತನಾಡಿದ ಅವರು, ‘2025ರ ಕೊನೆಯಲ್ಲಿ ಬಿಹಾರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯು ಬಿಹಾರಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಮೈಲಿಗಲ್ಲಾಗಲಿದೆ’ ಎಂದು ಹೇಳಿದರು.

‘ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಅಧಿಕೃತವಾಗಿಯೇ ತಿರುಚಲಾಗಿದೆ. ಇದೇ ಕಾರಣಕ್ಕಾಗಿ ಬಿಹಾರದಲ್ಲಿ ಸಿಡಬ್ಲ್ಯುಸಿ ಸಭೆ ನಡೆಸಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಇಲ್ಲಿ ನಮ್ಮ ಬದ್ಧತೆಯನ್ನು ಪುನಃ ದೃಢೀಕರಿಸಿದ್ದೇವೆ’ ಎಂದರು.

‘ಮುಕ್ತ ಮತ್ತು ಪಾರದರ್ಶಕ ಚುನಾವಣೆಯು ಪ್ರಜಾಪ್ರಭುತ್ವದ ಬುನಾದಿ. ಆದರೆ ಇಂದು ಚುನಾವಣಾ ಆಯೋಗವು ಮುಕ್ತ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗಳು ಎದುರಾಗಿವೆ’ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದರು.

‘ಮತಕಳವಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ಪ್ರಶ್ನೆಗಳಿಗೆ ಆಯೋಗ ಉತ್ತರಿಸಬೇಕು. ಅದನ್ನು ಬಿಟ್ಟು ಅದು ಪ್ರಮಾಣಪತ್ರ ಸಲ್ಲಿಸುವಂತೆ ನಮಗೆ ಸೂಚಿಸುತ್ತಿದೆ’ ಎಂದು ಅವರು ಕಿಡಿಕಾರಿದರು.

‘ಮತಕಳವು’ ಎಂಬುದು ಪಡಿತರ ಕಳವು, ಪಿಂಚಣೆ, ಔಷಧಿ, ಮಕ್ಕಳ ವಿದ್ಯಾರ್ಥಿ ವೇತನ ಮತ್ತು ಪರೀಕ್ಷಾ ಶುಲ್ಕದ ಕಳವಿಗೆ ದಾರಿ ಮಾಡಿಕೊಡುತ್ತದೆ. ಈ ಮೂಲಕ ದಲಿತರು, ಬುಡಕಟ್ಟು ಜನರು, ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಜನರು ಹಾಗೂ ಅಲ್ಪಸಂಖ್ಯಾತರನ್ನು ದುರ್ಬಲ ಮತ್ತು ಬಡತನದಲ್ಲಿಯೇ ಮುಂದುವರಿಸುವಂತೆ ಮಾಡುವ ಹುನ್ನಾರ ಇದಾಗಿದೆ ಎಂದು ಅವರು ಟೀಕಿಸಿದರು.

ಈ ನಿಟ್ಟಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ‘ಮತದಾರರ ಅಧಿಕಾರ ಯಾತ್ರೆ’ ಹಮ್ಮಿಕೊಂಡು ಜನ ಜಾಗೃತಿ ಮೂಡಿಸಿದ್ದಾರೆ. ಯಾತ್ರೆಯಲ್ಲಿ ಅಸಂಖ್ಯಾತ ಜನರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

‘ನಮ್ಮ ದೇಶವು ಆರ್ಥಿಕ ಹಿಂಜರಿಕೆ, ನಿರುದ್ಯೋಗ, ಸಾಮಾಜಿಕ ಧ್ರುವೀಕರಣ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲದೆ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಗುರಿಯಾಗಿಸಿ, ಅವುಗಳನ್ನು ದುರ್ಬಲಗೊಳಿಸುವ ಕೃತ್ಯಗಳೂ ನಡೆಯುತ್ತಿವೆ’ ಎಂದು ಅವರು ತಿಳಿಸಿದರು. 

‘ಬಿಜೆಪಿ ನೀಡಿದ್ದ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಇಲ್ಲಿಯವರೆಗೂ ಈಡೇರಿಲ್ಲ. ಯುವ ಜನರು ನಿರುದ್ಯೋಗ ಸಮಸ್ಯೆಯಿಂದ ಬಸವಳಿದಿದ್ದಾರೆ. ಜಿಎಸ್‌ಟಿಯಿಂದ ದೇಶದ ಆರ್ಥಿಕತೆ ಹಳಿ ತಪ್ಪಿದೆ. ಎಂಟು ವರ್ಷಗಳ ಬಳಿಕ ತನ್ನ ತಪ್ಪನ್ನು ಅರ್ಥ ಮಾಡಿಕೊಂಡಿರುವ ಪ್ರಧಾನಿ, ಇದೀಗ ಜಿಎಸ್‌ಟಿ ಸುಧಾರಣೆ ತಂದಿದ್ದಾರೆ. ಈ ಸುಧಾರಣೆಯನ್ನು ಜಾರಿಗೊಳಿಸುವಂತೆ ಕಾಂಗ್ರೆಸ್‌ ಬಹಳ ಹಿಂದಿನಿಂದ ಹೇಳಿಕೊಂಡು ಬಂದಿತ್ತು’ ಎಂದು ಅವರು ತಿಳಿಸಿದರು.

‘ಎನ್‌ಡಿಎಯಲ್ಲಿ ಬಿರುಕು’:

‘ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಆಂತರಿಕ ಕಲಹ ಇದೆ. ಜೆಡಿಯು ವರಿಷ್ಠ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ನಿವೃತ್ತರಾಗಿದ್ದಾರೆ. ಬಿಜೆಪಿಯು ಅವರನ್ನು ಹೊರೆ ಎಂದು ಭಾವಿಸುತ್ತಿದೆ’ ಎಂದು ಖರ್ಗೆ ಆರೋಪಿಸಿದರು. 

ಬಿಹಾರದಲ್ಲಿ ಶೇ 80ರಷ್ಟು ಜನರು ಒಬಿಸಿ, ಇಬಿಸಿ ಮತ್ತು ಎಸ್‌ಸಿ, ಎಸ್‌ಟಿ ಪ್ರವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಜನರು ಜಾತಿ ಗಣತಿ ಮತ್ತು ಮೀಸಲಾತಿ ಪಾರದರ್ಶಕವಾಗಿರಬೇಕು ಎಂದು ಬಯಸುತ್ತಾರೆ ಎಂದು ಅವರು ಪ್ರತಿಪಾದಿಸಿದರು.

ಬಿಹಾರದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು ಮುಕ್ತ ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಯನ್ನು ಆಯೋಗ ನಡೆಸಬೇಕು
–ಸಚಿನ್‌ ಪೈಲಟ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
‘ಸ್ನೇಹಿತರ’ ಅವಧಿಯಲ್ಲಿ ಭಾರತಕ್ಕೆ ಸಂಕಷ್ಟ: ಖರ್ಗೆ
ಪ್ರಧಾನಿ ನರೇಂದ್ರ ಮೋದಿ ಅವರು ‘ನನ್ನ ಸ್ನೇಹಿತ’ ಎಂದು ಹೆಮ್ಮೆಯಿಂದ ಹೇಳುವ ವ್ಯಕ್ತಿಗಳು ಭಾರತವನ್ನು ಹಲವು ಸಂಕಷ್ಟಗಳಿಗೆ ಸಿಲುಕಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.  ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿ ಎಚ್‌1ಬಿ ವೀಸಾ ಶುಲ್ಕವನ್ನು ಅತಿಯಾಗಿ ಹೆಚ್ಚಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕ್ರಮಗಳನ್ನು ಉಲ್ಲೇಖಿಸಿ ಅವರು ಮಾತನಾಡಿದರು. ಈ ಸ್ನೇಹಿತರ ಅವಧಿಯಲ್ಲಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸವಾಲು ಮತ್ತು ಸಂಕಷ್ಟಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.