ADVERTISEMENT

ಬಿಹಾರ ಚುನಾವಣೆ: 2ನೇ ಹಂತದ ಮತದಾನ ಇಂದು; 1,302 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಪಿಟಿಐ
Published 10 ನವೆಂಬರ್ 2025, 19:30 IST
Last Updated 10 ನವೆಂಬರ್ 2025, 19:30 IST
<div class="paragraphs"><p>ಗಯಾದಲ್ಲಿ ಮತಪೆಟ್ಟಿಗೆಗಳನ್ನು ಹಿಡಿದುಕೊಂಡು ನಿಯೋಜಿಸಲಾದ ತಮ್ಮ ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ</p></div>

ಗಯಾದಲ್ಲಿ ಮತಪೆಟ್ಟಿಗೆಗಳನ್ನು ಹಿಡಿದುಕೊಂಡು ನಿಯೋಜಿಸಲಾದ ತಮ್ಮ ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

   

–ಪಿಟಿಐ ಚಿತ್ರ

ಪಟ್ನಾ, ಬಿಹಾರ: ಇಲ್ಲಿನ ವಿಧಾನಸಭೆಯ ಎರಡನೇ ಹಾಗೂ ಕೊನೇ ಹಂತದ ಮತದಾನ ಇಂದು ನಡೆಯಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರದ ಅರ್ಧಕ್ಕಿಂತಲೂ ಹೆಚ್ಚು ಸಚಿವರು ಸೇರಿದಂತೆ 1,302 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ADVERTISEMENT

122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 1.75 ಕೋಟಿ ಮಹಿಳೆಯರು ಸೇರಿದಂತೆ 3.70 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮುಸಲ್ಮಾನರ ಬಾಹುಳ್ಯವುಳ್ಳ ಸೀಮಾಂಚಲ ಪ್ರದೇಶದ ಹೆಚ್ಚಿನ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯಲಿದೆ. ಪಶ್ಚಿಮ ಹಾಗೂ ಪೂರ್ವ ಚಂಪಾರಣ, ಸೀತಾಮಡಿ, ಮಧುಬನಿ, ಸುಪಾಲ್‌, ಅರಾರಿಯಾ ಹಾಗೂ ಕಿಶನ್‌ಗಂಜ್‌ ಜಿಲ್ಲೆಗೆ ಒಳಪಡುವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಎಲ್ಲಾ ಜಿಲ್ಲೆಗಳು ನೇಪಾಳದೊಂದಿಗೆ ಗಡಿ ಹಂಚಿಕೊಂಡಿವೆ.

ಸುಪಾಲ್‌ ಕ್ಷೇತ್ರದಿಂದ ಜೆಡಿಯು ಪಕ್ಷದ ಹಿರಿಯ ಮುಖಂಡ ಬಿಜೇಂದ್ರ ಪ್ರಸಾದ್‌ ಯಾದವ್‌, ಗಯಾ ನಗರ ಕ್ಷೇತ್ರದಿಂದ ಬಿಜೆಪಿಯ ಪ್ರೇಮ್‌ ಕುಮಾರ್‌ ಸತತ 8 ಅವಧಿಗೆ ಆಯ್ಕೆಯಾಗಿದ್ದು, ಮತ್ತೆ ಕ್ಷೇತ್ರ ಉಳಿಸಿಕೊಳ್ಳುವ ಉಮೇದಿನಲ್ಲಿದ್ದಾರೆ.

ಉಳಿದಂತೆ ಬಿಜೆಪಿಯ ರೇಣುದೇವಿ (ಬೇತಿಯಾ), ನೀರಜ್‌ ಕುಮಾರ್‌ ಸಿಂಗ್‌ (ಛತ್‌ಪುರ), ಜೆಡಿಯುನ ಲೇಸಿ ಸಿಂಗ್‌ (ಧಮ್‌ದಾಹಾ), ಶೀಲಾ ಮಂಡಲ್‌ (ಫೂಲ್‌ಪರಾಸ್‌), ಜಮಾ ಖಾನ್‌(ಚೈನ್‌ಪುರ) ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಉಳಿದಂತೆ ಬಿಜೆಪಿಯ ಪ್ರಮುಖ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ತಾರಾಕಿಶೋರ್‌ ಪ್ರಸಾದ್‌ ಅವರು ಕಟಿಹಾರ್ ವಿಧಾನಸಭಾ ಕ್ಷೇತ್ರದಿಂದ 5ನೇ ಅವಧಿಗೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಈ ಜಿಲ್ಲೆಗೆ ವ್ಯಾಪ್ತಿಗೆ ಒಳಪಡುವ ಬಲರಾಂಪುರ ಹಾಗೂ ಕಡ್ವಾ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಜಯಗಳಿಸಿರುವ ಸಿಪಿಎಂ ಶಾಸಕಾಂಗ ಪಕ್ಷದ ನಾಯಕ ಮೆಹಬೂಬ್‌ ಆಲಂ, ಕಾಂಗ್ರೆಸ್‌ ಶಾಸಕಾಂಗ ನಾಯಕ ಅಹಮ್ಮದ್‌ ಖಾನ್‌ ಕಣದಲ್ಲಿರುವ ಪ್ರಮುಖ ಹುರಿಯಾಳುಗಳಾಗಿದ್ದಾರೆ.

ಎನ್‌ಡಿಎ ಮಿತ್ರಕೂಟ ಹಿಂದೂಸ್ತಾನ್‌ ಅವಾಮ್‌ ಮೋರ್ಚಾ ಹಾಗೂ ರಾಷ್ಟ್ರೀಯ ಲೋಕಾಮೋರ್ಚಾ ಪಕ್ಷದಿಂದ ಕಣಕ್ಕಿಳಿದಿರುವ ತಲಾ ಆರು ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯಲಿದೆ. 

ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನವು ನವೆಂಬರ್‌ 6ರಂದು ನಡೆದಿತ್ತು. ನವೆಂಬರ್‌ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ವಿರೋಧ ಪಕ್ಷಗಳಾದ ‘ಇಂಡಿಯಾ’ ಒಕ್ಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ಹಾಗೂ ಎಡಪಕ್ಷಗಳಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಎನ್‌ಡಿಎ ಮಿತ್ರಕೂಟವು ನಿತೀಶ್‌ ಕುಮಾರ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದೆ.

ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ಮುನ್ನಾದಿನವಾದ ಸೋಮವಾರ ಗಯಾದಲ್ಲಿ ಗಸ್ತುಕಾಯುತ್ತಿದ್ದ ಭದ್ರತಾ ಸಿಬ್ಬಂದಿ–ಪಿಟಿಐ ಚಿತ್ರ
ಗಮನಸೆಳೆದ ‘ಗ್ಯಾರಂಟಿ’ ಘೋಷಣೆ 
ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ ₹2,500 ನೆರವು, 200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ₹500ಕ್ಕೆ ಒಂದು ಅನಿಲ ಸಿಲಿಂಡರ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇವೆ, ವೃದ್ಧರಿಗೆ ಮಾಸಿಕ ₹1,500 ಪಿಂಚಣಿ, ಅಂಗವಿಕಲರಿಗೆ ಮಾಸಿಕ ₹3 ಸಾವಿರ ಪಿಂಚಣಿ, ₹25 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅತಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 20ರಿಂದ 30ಕ್ಕೆ ಏರಿಸುವುದು, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇಕಡ 16ರಿಂದ 20ಕ್ಕೆ ಏರಿಸುವುದು, ಎಸ್‌.ಟಿ ಮೀಸಲಾತಿಯನ್ನು 1ರಿಂದ 2ಕ್ಕೆ ಏರಿಕೆ ಮಾಡುವುದಾಗಿ ‘ಇಂಡಿಯಾ’ ಒಕ್ಕೂಟ ವಾಗ್ದಾನ ನೀಡಿದೆ.
ಬಿಹಾರದ ಜನರು ರಾಜ್ಯದ ಚಿತ್ರಣವನ್ನೇ ಬದಲಾಯಿಸಲು ಹೊರಟಿದ್ದಾರೆ. ಬಿಹಾರದ ವೈಭವವನ್ನು ಪುನಃ ಸ್ಥಾಪಿಸಲಾಗುತ್ತದೆ. ನಮ್ಮ ಗ್ಯಾರಂಟಿಗಳು ಇದನ್ನು ಸಾಧ್ಯವಾಗಿಸಲಿವೆ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ
ನವೆಂಬರ್‌ 6ರಂದು ಮತ ಚಲಾಯಿಸಿದ ಲಿಂಗವಾರು ಮತದಾರರ ಅಂಕಿಅಂಶಗಳನ್ನು ಚುನಾವಣಾ ಆಯೋಗವು ಇದುವರೆಗೂ ಬಹಿರಂಗಪಡಿಸಿಲ್ಲ. ಈ ಹಿಂದೆ ತಕ್ಷಣವೇ ನೀಡಲಾಗುತ್ತಿತ್ತು.
– ತೇಜಸ್ವಿ ಯಾದವ್‌ ಆರ್‌ಜೆಡಿ ಮುಖಂಡ
ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರವು ರಚಿಸಲಿದ್ದು 5 ವರ್ಷಗಳ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು.
– ಜೈರಾಮ್‌ ರಮೇಶ್‌, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ)

‘ಮಹಾಘಟಬಂಧನ ಸರ್ಕಾರ ಖಚಿತ; ಗ್ಯಾರಂಟಿ ಜಾರಿ ನಿಶ್ಚಿತ’

ನವದೆಹಲಿ: ‘ಬಿಹಾರದಲ್ಲಿದ್ದ 20 ವರ್ಷಗಳ ಅಸಹಾಯಕ ಸರ್ಕಾರವನ್ನು ಮಹಾಘಟಬಂಧನವು ಕೊನೆಗೊಳಿಸಲಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

‘ರಾಜ್ಯದಲ್ಲಿ ವಲಸೆ ಕೊನೆಯಾಗಲಿದೆ. ಯುವಕರ ಜೀವನದಲ್ಲಿ ಕವಿದಿದ್ದ ಕತ್ತಲು ಸರಿಯಲಿದೆ. ಮಂಗಳವಾರದಿಂದಲೇ ಪ್ರತಿ ಮನೆಯೂ ಬೆಳಗಲಿದೆ. ಅನ್ಯಾಯವನ್ನು ನಾವು ಕೊನೆಗೊಳಿಸಿದ್ದು ಬಿಹಾರವನ್ನು ಸಾಮಾಜಿಕ ನ್ಯಾಯದ ನೆಲವನ್ನಾಗಿ ಪರಿವರ್ತಿಸಲಿದ್ದೇವೆ’ ಎಂದು ಖರ್ಗೆ ಅವರು ‘ಎಕ್ಸ್‌’ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ದಲಿತರು ಮಹಾದಲಿತರು ಬುಡಕಟ್ಟು ಸಮುದಾಯದವರು ಅತಿ ಹಿಂದುಳಿದವರು ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸೂಕ್ತ ನ್ಯಾಯ ದೊರೆಯಲಿದೆ. ಮಹಿಳೆಯರು ರೈತರು ಯುವಕರು ಮಾತ್ರವಲ್ಲದೇ ಸಮಾಜದ ಪ್ರತಿ ವರ್ಗದ ಆರ್ಥಿಕ ಸ್ಥಿತಿಯ ಸುಧಾರಣೆ ಅನುಭವ ಪಡೆಯಲಿದ್ದಾರೆ’ ಎಂದು ಖರ್ಗೆ ಭರವಸೆ ನೀಡಿದ್ದಾರೆ.

ಐತಿಹಾಸಿಕ ಗೆಲುವು– ಬಿಜೆಪಿ ವಿಶ್ವಾಸ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಕೂಟವು ಐತಿಹಾಸಿಕ ಗೆಲುವು ಪಡೆಯಲಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಚುನಾವಣಾ ಆಯೋಗದ ವಿರುದ್ಧ ತೇಜಸ್ವಿ ಯಾದವ್‌ ಅವರ ಮಾಡಿರುವ ಆರೋಪಗಳು ಸುಳ್ಳು ಎಂದ ಅವರು ನಿರೀಕ್ಷಿತ ಫಲಿತಾಂಶ ಬರದಿದ್ದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳ ವಿರುದ್ಧ ದಾಳಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿವೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.