ಪಟ್ನಾ: ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ಸಲುವಾಗಿ ಯುವಜನ ಆಯೋಗವನ್ನು ರಚಿಸಲು ಬಿಹಾರ ಸರ್ಕಾರ ಮಂಗಳವಾರ ನಿರ್ಧರಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.
ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರೆತಯ ಬಗ್ಗೆ ವಿರೋಧಪಕ್ಷಗಳು ಟೀಕೆ ಮಾಡುತ್ತಿರುವ ಕಾರಣ ನಿತೀಶ್ ಕುಮಾರ್ ಸರ್ಕಾರವು ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಈ ನಿರ್ಧಾರವನ್ನು ಕೈಗೊಂಡಿದೆ.
‘ಸಮಾಜದಲ್ಲಿನ ಯುವಕರ ಪರಿಸ್ಥಿತಿಯನ್ನು ಸುಧಾರಿಸಲು ಅಗತ್ಯ ಕ್ರಮಗಳ ಬಗ್ಗೆ ಯುವಜನ ಆಯೋಗವು ಸರ್ಕಾರಕ್ಕೆ ಸಲಹೆ ನೀಡಲಿದೆ. ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗ ನೀಡಲು ಇಲಾಖೆಗಳೊಂದಿಗೆ ಕೆಲಸ ಮಾಡಲಿದೆ’ ಎಂದು ನಿತೀಶ್‌ಕುಮಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಆಯೋಗವು ಒಬ್ಬರು ಮುಖ್ಯಸ್ಥರು, ಇಬ್ಬರು ಉಪಮುಖ್ಯಸ್ಥರು ಮತ್ತು ಏಳು ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಅವರೆಲ್ಲರೂ 45ಕ್ಕಿಂತ ಕಡಿಮೆ ವಯೋಮಿತಿಯವರಾಗಿರುತ್ತಾರೆ’ ಎಂದು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಂಗವಿಕಲರಿಗೆ ಆರ್ಥಿಕ ನೆರವು ನೀಡುವ ಪ್ರಸ್ತಾವ ಸೇರಿದಂತೆ ಒಟ್ಟು 43 ಪ್ರಸ್ತಾವಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.