
ಅಮಿತ್ ಶಾ
(ಪಿಟಿಐ ಚಿತ್ರ)
ಶಿವಹರ್: 'ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ರಕ್ಷಣಾ ಕಾರಿಡಾರ್ ಸ್ಥಾಪಿಸಲಿದ್ದೇವೆ. ಪ್ರತಿ ಜಿಲ್ಲೆಗಳಲ್ಲಿಯೂ ಕಾರ್ಖಾನೆಗಳನ್ನು ತೆರೆಯಲಾಗುವುದು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಸೋಮವಾರ) ಭರವಸೆ ನೀಡಿದ್ದಾರೆ.
ಶಿವಹರ್‌ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು ನಿರ್ನಾಮವಾಗಲಿದೆ' ಎಂದು ಹೇಳಿದ್ದಾರೆ.
'ಬಿಹಾರ ರಾಜ್ಯವನ್ನು ಪ್ರವಾಹ ಮುಕ್ತಗೊಳಿಸಲು ಆಯೋಗವನ್ನು ರಚಿಸಲಾಗುವುದು' ಎಂದೂ ಅಮಿತ್ ಶಾ ಭರವಸೆ ನೀಡಿದ್ದಾರೆ.
'ನಾವು ರಕ್ಷಣಾ ಕಾರಿಡಾರ್ ಮಂಜೂರು ಮಾಡಲಿದ್ದೇವೆ. ಪ್ರತಿ ಜಿಲ್ಲೆಗಳಲ್ಲೂ ಕಾರ್ಖಾನೆಗಳನ್ನು ತೆರೆಯಲಾಗುವುದು. ಇದರ ಜೊತೆಗೆ ಎಂಎಸ್‌ಎಂಇ ಹಾಗೂ ಕೈಗಾರಿಕಾ ಪಾರ್ಕ್ ತೆರೆಯಲಾಗುವುದು' ಎಂದಿದ್ದಾರೆ.
'ಸೀತಾ ದೇಗುಲದ ಪ್ರತಿಷ್ಠಾಪನಾ ದಿನದಂದು ಸೀತಾಮರ್ಹಿಯಿಂದ ಅಯೋಧ್ಯೆಗೆ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.
ಪುನೌರಾ ಧಾಮದಲ್ಲಿ ₹850 ಕೋಟಿ ವೆಚ್ಚದಲ್ಲಿ ಸೀತಾ ದೇಗುಲಕ್ಕೆ ಶಿಲಾನ್ಯಾಸ ನೇರವೇರಿಸಿರುವುದಾಗಿ ಶಾ ತಿಳಿಸಿದ್ದಾರೆ.
'₹5000 ಕೋಟಿ ವೆಚ್ಚದಲ್ಲಿ ಅಯೋಧ್ಯೆ-ಸೀತಾಮರ್ಹಿ ರೈಲು ಹಳಿಯನ್ನು ದ್ವಿಗುಣಗೊಳಿಸುವುದು' ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
'ರಾಜ್ಯದಲ್ಲಿ ವಿಮಾನ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುವುದು. ಬಿಹಾರದ ಪ್ರತಿ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ತೆರೆಯಲಾಗುವುದು' ಎಂದು ಹೇಳಿದ್ದಾರೆ.
'ಬಿಹಾರಕ್ಕೆ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ₹18.70 ಲಕ್ಷ ಕೋಟಿ ಮಂಜೂರು ಮಾಡಿದ್ದಾರೆ. ಆರ್‌ಜೆಡಿ-ಕಾಂಗ್ರೆಸ್ ಆಡಳಿತದಲ್ಲಿ ₹2.80 ಲಕ್ಷ ಕೋಟಿ ಮಾತ್ರ ನೀಡಲಾಗಿತ್ತು. ಲಾಲೂ ಪ್ರಸಾದ್ ಅವರ ಆಡಳಿತವು ಹಗರಣಗಳಿಂದ ಕೂಡಿತ್ತು. ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮೋದಿ ಅವರಿಂದ ಮಾತ್ರ ಅಭಿವೃದ್ಧಿಯತ್ತ ಮುನ್ನಡೆಸಲು ಸಾಧ್ಯ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.