ADVERTISEMENT

ಬಿಹಾರದಲ್ಲಿ ಅಧಿಕಾರ ಕೈತಪ್ಪಿದ ಹಿನ್ನೆಲೆ: ನಿತೀಶ್‌ ವಿರುದ್ಧ ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 10:50 IST
Last Updated 10 ಆಗಸ್ಟ್ 2022, 10:50 IST
ಬಿಹಾರ ಪಟ್ನಾ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು
ಬಿಹಾರ ಪಟ್ನಾ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು   

ಪಟ್ನಾ: ಬಿಹಾರದಲ್ಲಿ ಅಧಿಕಾರದಿಂದ ವಂಚಿತವಾಗಿರುವ ಬಿಜೆಪಿಯು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದೆ.

ಐದು ವರ್ಷಗಳ ಹಿಂದೆ ಹಿಂಬಾಗಿಲ ಮೂಲಕ ಸರ್ಕಾರ ರಚಿಸಲು ಕೈಜೋಡಿಸಿದ್ದ ಮುಖ್ಯಮಂತ್ರಿ ನಿತೀಶ್ ನಿರ್ಧಾರವನ್ನು ಬಿಜೆಪಿ ‌ಖಂಡಿಸಿದೆ.

ಪಟ್ನಾದ ಬೀರಚಂದ್‌ ಪಟೇಲ್ ಮಾರ್ಗದಲ್ಲಿರುವ ಪಕ್ಷದ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಿಹಾರದ ಎಲ್ಲಾ ಬಿಜೆಪಿ ಸಂಸದರು ಮತ್ತು ಶಾಸಕರು ಭಾಗವಹಿಸಿದ್ದರು. 71 ವರ್ಷದ ನಿತೀಶ್‌ ಅವರು ಎಸಗಿದ ದ್ರೋಹದ ಬಗ್ಗೆ ಆಂದೋಲನಗಳ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಪ್ರತಿಜ್ಞೆ ಮಾಡಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿತೀಶ್‌ ಕುಮಾರ್‌ಗೆ ಅಸೂಯೆ ಇದೆ. ಅವರಿಗೆ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇದೆ. ಬಿಜೆಪಿಯಿಂದ ದೂರವಾಗಲು ಈ ಆಸೆಯೇ ಕಾರಣ. ಮೈತ್ರಿಯನ್ನು ಊರುಗೋಲಾಗಿ ಬಳಸದೆ ಸ್ವಂತ ಬಲದಿಂದ ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ನಿತೀಶ್‌ ಯತ್ನಿಸಲಿ’ ಎಂದು ಹೇಳಿದ್ದಾರೆ.

ಬಿಜೆಪಿಯ ಸಖ್ಯ ತೊರೆದ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳ ಮಹಾಘಟಬಂಧನದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ಬೆಂಬಲದೊಂದಿಗೆ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.