ADVERTISEMENT

Bihar Result | ‘ಯಾತ್ರೆ’ ಕೈಗೊಂಡಲ್ಲಿಯೂ ಕಾಂಗ್ರೆಸ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 16:20 IST
Last Updated 14 ನವೆಂಬರ್ 2025, 16:20 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ಕಾಂಗ್ರೆಸ್‌ ಪಕ್ಷ, ತನ್ನ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಗಸ್ಟ್‌ನಲ್ಲಿ ‘ಮತ ಅಧಿಕಾರ ಯಾತ್ರೆ’ ಕೈಗೊಂಡಿತ್ತು. ಈ ಯಾತ್ರೆ ಸಾಗಿದ ಮಾರ್ಗದ ಪ್ರದೇಶಗಳಲ್ಲಿನ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.

ಮತಗಳ ಕ್ರೋಡೀಕರಣ ಉದ್ದೇಶದಿಂದ ಕೈಗೊಂಡಿದ್ದ ಈ ಯಾತ್ರೆಯು ಸಾಸಾರಾಮ್‌ದಿಂದ ಶುರುವಾಗಿ ಪಟ್ನಾದಲ್ಲಿ ಕೊನೆಯಾಗಿತ್ತು. 1,300 ಕಿ.ಮೀ. ಕ್ರಮಿಸಿದ್ದ ಈ ಯಾತ್ರೆಯು 25 ಜಿಲ್ಲೆಗಳ ಮೂಲಕ ಸಾಗಿತ್ತು. ಈ ಮಾರ್ಗದಲ್ಲಿ 120 ವಿಧಾನಸಭಾ ಕ್ಷೇತ್ರಗಳಿವೆ. ಅರರಿಯಾ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈ ಮಾರ್ಗದಲ್ಲಿನ ಕ್ಷೇತ್ರಗಳಲ್ಲಿ ಎನ್‌ಡಿಎದ ಶೇ90ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಆರು ಕ್ಷೇತ್ರಗಳಲ್ಲಿ ಗೆದ್ದಿದೆ.

ADVERTISEMENT

ಬಿಜೆಪಿಯು ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ರಾಹುಲ್‌ ಗಾಂಧಿ ಅವರನ್ನು ಕಿಚಾಯಿಸಿ ಹಾಗೂ ಟೀಕಿಸುವಂತಹ ಪೋಸ್ಟ್‌ಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಕಿದೆ.

‘ಮಕ್ಕಳ ದಿನಾಚರಣೆ ವೇಳೆ ‘ರಾಷ್ಟ್ರೀಯ ಮಗು’ ಅಸಮಾಧಾನಗೊಳ್ಳುವಂತೆ ಮಾಡಿದ್ದಕ್ಕಾಗಿ ಕ್ಷಮೆ ಇರಲಿ. ನಿಜಕ್ಕೂ ಇದು ದುರದೃಷ್ಟಕರ’ ಎಂಬ ಪೋಸ್ಟ್‌ ಹಾಕುವ ಮೂಲಕ ಬಿಜೆಪಿಯ ಅಸ್ಸಾಂ ಘಟಕವು ರಾಹುಲ್‌ ಗಾಂಧಿ ಅವರನ್ನು ಕುಟುಕಿದೆ. 

‘ಮುಂದಿನ ಸರದಿ ಪಶ್ಚಿಮ ಬಂಗಾಳ’ ಎಂಬುದಾಗಿ ಬಿಜೆಪಿಯ ಪಶ್ಷಿಮ ಬಂಗಾಳ ಘಟಕವು ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ. ಟಿಎಂಸಿ ಇದಕ್ಕೆ ತಿರುಗೇಟು ನೀಡಿ, ಪೋಸ್ಟ್‌ ಮಾಡಿದೆ.

95 ಚುನಾವಣೆಗಳಲ್ಲಿ ಸೋಲನುಭವಿಸಿರುವ ರಾಹುಲ್‌ ಗಾಂಧಿ ಅವರಿಗೆ ಭವಿಷ್ಯದಲ್ಲಿಯೂ ಸೋಲು ನಿಶ್ಚಿತ. ಪರಾಭವಗೊಂಡಾಗಲೆಲ್ಲಾ ಅವರು ಹೊಸ ಆರೋಪಗಳೊಂದಿಗೆ ಸಿದ್ಧರಾಗಿರುತ್ತಾರೆ. ಅವರ ಆರೋಪಗಳೆಲ್ಲಾ ಸುಳ್ಳು ಎಂಬುದು ದೇಶಕ್ಕೆ ಅರಿವಾಗಿದೆ
ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.