
ಪಟ್ನಾ: ಬಿಹಾರ ವಿಧಾನಸಭೆಯ 122 ಕ್ಷೇತ್ರಗಳಿಗೆ ನಾಳೆ (ನವೆಂಬರ್ 11) 2ನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
122 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 45,399 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯಯುತ ಮತದಾನಕ್ಕಾಗಿ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 500 ತುಕಡಿಗಳು (ಸುಮಾರು 50,000) ಚುನಾವಣಾ ಪೂರ್ವ ಕರ್ತವ್ಯದಲ್ಲಿ ನಿರತವಾಗಿದ್ದವು. ಬಳಿಕ ಸಿಎಪಿಎಫ್‌ನ ಇನ್ನೂ 500 ತುಕಡಿಗಳು ರಾಜ್ಯಕ್ಕೆ ಆಗಮಿಸಿವೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 3ನೇ ವಾರದಲ್ಲಿ ಹೆಚ್ಚುವರಿಯಾಗಿ 500 ತುಕಡಿಗಳು ರಾಜ್ಯಕ್ಕೆ ಬಂದಿವೆ. ಇದಲ್ಲದೇ ರಾಜ್ಯ ಪೊಲೀಸ್ ಇಲಾಖೆಯ ಸುಮಾರು 60,000ಕ್ಕೂ ಹೆಚ್ಚು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೀಸಲು ಪಡೆಯ ಸುಮಾರು 2,000 ಸಿಬ್ಬಂದಿ , ಬಿಹಾರದ ವಿಶೇಷ ಸಶಸ್ತ್ರ ಪೊಲೀಸ್ ಪಡೆಯ 30,000 ಸಿಬ್ಬಂದಿ, 20,000ಕ್ಕೂ ಹೆಚ್ಚು ಗೃಹರಕ್ಷಕರು, ಹೊಸದಾಗಿ ನೇಮಕಗೊಂಡ ಸುಮಾರು 19,000 ಕಾನ್‌ಸ್ಟೆಬಲ್‌ಗಳು ಮತ್ತು 1.5 ಲಕ್ಷ ಚೌಕಿದಾರರು (ಗ್ರಾಮೀಣ ಪೊಲೀಸರು) ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಶೇಕಡ 65.08ರಷ್ಟು ಮತದಾನವಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.