ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ವಿರೋಧ ಪಕ್ಷಗಳು ದ್ವಿಮುಖ ನೀತಿ ಪ್ರದರ್ಶಿಸುತ್ತಿವೆ ಎಂದು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಟೀಕಿಸಿದ್ದಾರೆ. ಇದಕ್ಕೆ ಜೆಡಿಯು ಧ್ವನಿಗೂಡಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಗೆ ಹಿಂದೆ ಆಗ್ರಹಿಸಿದ್ದ ವಿರೋಧ ಪಕ್ಷಗಳು ಈಗ ಪರಿಷ್ಕರಣಾ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆಯುವ ಸಂಬಂಧ ಚುನಾವಣಾ ಆಯೋಗ ಕೈಗೊಂಡಿರುವ ಈ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯಸಭೆಯ ಜೆಡಿಯು ಸದಸ್ಯ ಸಂಜಯ್ ಕುಮಾರ್ ಝಾ ಪ್ರತಿಪಾದಿಸಿದ್ದಾರೆ.
ಬಿಹಾರದಲ್ಲಿ 22 ವರ್ಷಗಳ ಬಳಿಕ ಚುನಾವಣಾ ಆಯೋಗವು ಎಸ್‌ಐಆರ್ ಕೈಗೆತ್ತಿಕೊಂಡಿದೆ. ಈ ಮೂಲಕ ಅದು ಅನರ್ಹ ಮತ್ತು ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವವರನ್ನು ಗುರುತಿಸಲಿದೆ. ಅಲ್ಲದೆ ಅರ್ಹ ಮತದಾರರು ಮಾತ್ರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
‘ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಬಳಿಕ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಗೋಚರವಾಗಿದ್ದವು ಎಂದು ವಿರೋಧ ಪಕ್ಷಗಳು ಹೇಳಿದ್ದವು. ಅಲ್ಲದೆ ರಾತ್ರೋರಾತ್ರಿ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವು ಎಂದೂ ಆರೋಪಿಸಿದ್ದವು. ಆ ರೀತಿ ಬಿಹಾರದಲ್ಲಿ ಆಗಬಾರದು ಎಂದು ಚುನಾವಣಾ ಆಯೋಗ ಎಸ್‌ಐಆರ್ ಕೈಗೊಂಡಿದೆ. ಆದರೆ ಅದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿವೆ’ ಎಂದು ಚಿರಾಗ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.