ADVERTISEMENT

ಬಿಹಾರ: ನಾಳೆಯಿಂದ ಲಾಕ್‌ಡೌನ್‌ ತೆರವು; ರಾತ್ರಿ ‍ಕರ್ಫ್ಯೂ ಜಾರಿ

ಪಿಟಿಐ
Published 8 ಜೂನ್ 2021, 10:32 IST
Last Updated 8 ಜೂನ್ 2021, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ:ಬಿಹಾರದಲ್ಲಿ ಕೋವಿಡ್‌ ಪ್ರಸರಣವನ್ನು ನಿಯಂತ್ರಿಸಲು ಒಂದು ತಿಂಗಳ ಹಿಂದೆ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಬುಧವಾರ(ಜೂನ್‌ 9)ತೆರವುಗೊಳಿಸುವುದಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿ‍ಪತ್ತು ನಿರ್ವಹಣಾ ತಂಡದೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿತೀಶ್‌ ಕುಮಾರ್‌ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಮಂಗಳವಾರ ಘೋಷಿಸಿದ್ದಾರೆ.

‘ಕೊರೊನಾ ಸೋಂಕಿನ ಪ್ರಸರಣವನ್ನು ತಡೆಯಲು ಲಾಕ್‌ಡೌನ್‌ ಹೇರಲಾಗಿತ್ತು. ಈಗ ಅದನ್ನು ತೆರವುಗೊಳಿಲಾಗುವುದು. ಆದರೆ ಕೆಲವೊಂದು ನಿರ್ಬಂಧಗಳು ಮುಂದುವರಿಯಲಿವೆ. ಸಂಜೆ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ’ ಎಂದು ಅವರು ಹೇಳಿದರು.

ADVERTISEMENT

ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇಕಡ 50ರಷ್ಟು ಸಾಮರ್ಥದೊಂದಿಗೆ ಸಂಜೆ 4 ಗಂಟೆ ತನಕ ಕಾರ್ಯ ನಿರ್ವಹಿಸಬಹುದು. ಈ ಹಿಂದೆ ಸರ್ಕಾರಿ ಕಚೇರಿಗಳಿಗೆ ಶೇಕಡ 25 ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅನುಮತಿ ನೀಡಲಾಗುತ್ತು. ಅಂಗಡಿ ಮುಗ್ಗಟ್ಟುಗಳು ಕೂಡ ಸಂಜೆ 5ರ ತನಕ ತೆರೆದಿರಬಹುದಾಗಿದೆ.

‘ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಲು ಸೂಚಿಸಲಾಗಿದೆ. ಮುಂದಿನ ವಾರದವರೆಗೆ ಕೆಲವೊಂದು ನಿರ್ಬಂಧಗಳು ಇರಲಿವೆ’ ಎಂದು ಅವರು ಹೇಳಿದರು.

ಬಿಹಾರದಲ್ಲಿ ಮೇ 5ರಂದು ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿತ್ತು. ಕಳೆದ ಕೆಲವು ವಾರಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.