ನವದೆಹಲಿ: ಬಿಹಾರದ ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಮತದಾರರ ಪಟ್ಟಿ ಸಮಗ್ರ ಪ್ರಕ್ರಿಯೆಯ ಅಗತ್ಯವು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗವು ಹೇಳಿತ್ತು. ಆದರೆ, ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಅರಿವು ಮೂಡಿಸುವ ಧೈರ್ಯ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಬೇಕಿತ್ತು ಎಂದಿದೆ.
ಬಿಹಾರದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ಪುನರಾರಂಭವಾಗಿದೆ ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಎಸ್‌ಐಆರ್ ಪ್ರಕ್ರಿಯೆಯ ವಿಶ್ಲೇಷಣೆಯನ್ನು ಅವರು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯು ಸಾಮೂಹಿಕವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವ ಭಯ ನಿವಾರಿಸಿದರೂ, ಪ್ರಕ್ರಿಯೆಯಲ್ಲಿ ನಿಖರತೆ, ಸಮಾನತೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ ಕೊರತೆಯಾಗಿದೆ ಎಂದು ವಿಶ್ಲೇಷಣೆ ತಿಳಿಸಿರುವುದಾಗಿ ಅವರು ಪೋಸ್ಟ್ ಮಾಡಿದ್ದಾರೆ.
ಈ ಉತ್ತಮ ವಿಶ್ಲೇಷಣೆಯು ಚುನಾವಣಾ ಆಯೋಗವು ನಡೆಸಿದ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣತೆ, ಸಮಾನತೆ ಮತ್ತು ನಿಖರತೆಯ ಮೂರು ಅಂಶಗಳಲ್ಲಿ ವಿಫಲವಾಗಿದೆ ಎಂದು ತೋರಿಸುತ್ತದೆ ಎಂಬುದಾಗಿ ರಮೇಶ್ ಹೇಳಿದ್ದಾರೆ.
‘ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಎಸ್‌ಐಆರ್ ಪ್ರಕ್ರಿಯೆಯ ಹೆಚ್ಚು ಅಗತ್ಯ ಎಂದು ಹೇಳಲಾಗಿತ್ತು. ಬಿಹಾರದಲ್ಲಿ ಅಂತಹ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಮಾಹಿತಿ ನೀಡುವ ಧೈರ್ಯವನ್ನು ಚುನಾವಣಾ ಆಯೋಗ ಹೊಂದಿಲ್ಲ’ ಎಂದು ಅವರು ಹೇಳಿದರು.
ಬಿಹಾರದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.