ನವದೆಹಲಿ: ಬಿಹಾರದಲ್ಲಿ ಕನಿಷ್ಠ 35.68 ಲಕ್ಷ ಮತದಾರರು ಮೃತಪಟ್ಟಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಅವರ ದಾಖಲಾಗಿದೆ ಎಂದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ದತ್ತಾಂಶವು ತೋರಿಸಿದೆ.
ಈಗಾಗಲೇ ಮತದಾರರ ಪಟ್ಟಿಯಲ್ಲಿರುವ 7.89 ಕೋಟಿ ಮತದಾರರಲ್ಲಿ ಶೇ 11.82 ರಷ್ಟು ಅಥವಾ 93.34 ಲಕ್ಷ ಜನರು ಇನ್ನೂ ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸದ ಕಾರಣ ಈ ಸಂಖ್ಯೆ ಹೆಚ್ಚಾಗಬಹುದು. ಸಲ್ಲಿಕೆಗೆ ಇದೇ 25 ಕೊನೆಯ ದಿನವಾಗಿದೆ. ಗಣತಿ ನಮೂನೆಗಳನ್ನು ಸಲ್ಲಿಸಿದ ಎಲ್ಲರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, ಜೂನ್ 25 ರಂದು ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭವಾದಾಗಿನಿಂದ ಬಿಎಲ್‌ಒಗಳು ಎರಡು ಸುತ್ತಿನ ಮನೆ-ಮನೆ ಭೇಟಿಯ ಸಮಯದಲ್ಲಿ 7.89 ಕೋಟಿ ಮತದಾರರ ಪೈಕಿ 6.60 ಕೋಟಿ ಅಥವಾ ಶೇ 83.66 ರಷ್ಟು ಗಣತಿ ನಮೂನೆಗಳನ್ನು ಸಂಗ್ರಹಿಸಿದ್ದಾರೆ. 2003ರ ನಂತರ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ವಿಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ.
ಇದಲ್ಲದೆ, ಶೇ1.59 ಮತದಾರರು ಸಾವಿಗೀಡಾಗಿದ್ದು, ಶೇ 2.2 ರಷ್ಟು ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಶೇ 0.73 ರಷ್ಟು ಮತದಾರರ ಹೆಸರು ಹಲವು ಬಾರಿ ದಾಖಲಾಗಿದೆ.
ಇದರರ್ಥ ಸುಮಾರು 12.55 ಲಕ್ಷ ಮತದಾರರು ಮೃತಪಟ್ಟಿದ್ದರೆ, 17.37 ಲಕ್ಷ ಮತದಾರರು ಶಾಶ್ವತವಾಗಿ ಬಿಹಾರದಿಂದ ಹೊರಗೆ ಸ್ಥಳಾಂತರಗೊಂಡಿದ್ದಾರೆ ಮತ್ತು ಇನ್ನೂ 5.76 ಲಕ್ಷ ಮತದಾರರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರುಗಳನ್ನು ದಾಖಲಿಸಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ಆಯೋಗ ಹೇಳಿದೆ.
ಬಿಹಾರದಿಂದ ತಾತ್ಕಾಲಿಕವಾಗಿ ವಲಸೆ ಹೋಗಿರುವ ಮತದಾರರನ್ನು ಸಂಪರ್ಕಿಸಲು ಪತ್ರಿಕಾ ಜಾಹೀರಾತುಗಳು ಮತ್ತು ನೇರ ಸಂಪರ್ಕದ ಮೂಲಕ ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆಗಸ್ಟ್ 1ರಂದು ಪ್ರಕಟಿಸಲಾಗುವ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ಸೇರಿಸಲು ಮತ್ತು ಗಣತಿ ನಮೂನೆಗಳನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಲು ಅವರಿಗೆ ತಿಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ತಾತ್ಕಾಲಿಕ ವಲಸೆಯಲ್ಲಿರುವ ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ECINet ಅಪ್ಲಿಕೇಶನ್ ಮೂಲಕ ಅಥವಾ https://voters.eci.gov.in ನಲ್ಲಿನ ಆನ್‌ಲೈನ್ ಫಾರ್ಮ್ ಮೂಲಕ ಗಣತಿ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಭರ್ತಿ ಮಾಡಬಹುದು. ಅವರು ತಮ್ಮ ಕುಟುಂಬ ಸದಸ್ಯರ ಮೂಲಕ ಅಥವಾ ವಾಟ್ಸ್ಆ್ಯಪ್ ಅಥವಾ ಅಂತಹುದೇ ಅಪ್ಲಿಕೇಶನ್‌ಗಳು ಸೇರಿದಂತೆ ಯಾವುದೇ ಆನ್‌ಲೈನ್ ವಿಧಾನಗಳ ಮೂಲಕ ಸಂಬಂಧಪಟ್ಟ ಬಿಎಲ್‌ಒಗಳಿಗೆ ತಮ್ಮ ಫಾರ್ಮ್‌ಗಳನ್ನು ಕಳುಹಿಸಬಹುದು ಎಂದು ಅದು ಹೇಳಿದೆ.
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಇಎಫ್‌ಗಳನ್ನು ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ. ಸುಮಾರು ಒಂದು ಲಕ್ಷ ಬಿಎಲ್‌ಒಗಳು ಶೀಘ್ರದಲ್ಲೇ ತಮ್ಮ ಮೂರನೇ ಸುತ್ತಿನ ಮನೆ-ಮನೆ ಭೇಟಿಗಳನ್ನು ಆರಂಭಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.