ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಸೋಮವಾರವೂ ಪ್ರತಿಭಟನೆ ನಡೆಸಿದವು. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತಿತರರು ಇದ್ದರು
–ಪಿಟಿಐ ಚಿತ್ರ
ನವದೆಹಲಿ: ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಸೋಮವಾರವೂ ಪ್ರತಿಭಟನೆ ನಡೆಸಿದವು.
ಹೀಗಾಗಿ ರಾಜ್ಯಸಭೆಯಲ್ಲಿ ಯಾವುದೇ ವಿಷಯದ ಬಗ್ಗೆ ಫಲಪ್ರದ ಚರ್ಚೆ ನಡೆಸದೆ ಕಲಾಪವನ್ನು ಮುಂದೂಡಲಾಯಿತು, ಹಲವು ಅಡಚಣೆಗಳ ಮಧ್ಯೆ ಲೋಕಸಭೆಯ ಬೆಳಗಿನ ಕಲಾಪ ನಡೆಯಿತು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಕನಿಮೋಳಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ತಿನ ‘ಮಕರ ದ್ವಾರ’ದ ಹೊರಗೆ ಪ್ರತಿಭಟನೆ ನಡೆಸಿದರು. ಖರ್ಗೆ ಮತ್ತಿತರರ ಘೋಷಣೆಗಳಿಗೆ ಉಳಿದ ಸಂಸದರು ಪ್ರತಿಧ್ವನಿಸುತ್ತಿದ್ದುದು ಕಂಡುಬಂತು.
ರಾಜ್ಯಸಭೆಯಲ್ಲಿ ಮಧ್ಯಾಹ್ನ 11ರಿಂದ 1 ಗಂಟೆವರೆಗಿನ ಶೂನ್ಯ ಅವಧಿ ಮತ್ತು ಪ್ರಶ್ನಾವಳಿ ಸಮಯದಲ್ಲಿ ತೀವ್ರ ಗದ್ದಲ ಉಂಟಾಗಿದ್ದರಿಂದ ಎರಡು ಬಾರಿ ಕಲಾಪವನ್ನು ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆ ನಂತರವೂ ಪ್ರತಿಭಟನೆ ಮುಂದುವರಿದ ಕಾರಣ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಎಸ್‌ಐಆರ್ ಕುರಿತು ಚರ್ಚೆ ನಡೆಸುವಂತೆ ಸಲ್ಲಿಸಲಾದ 26 ಮನವಿಗಳನ್ನೂ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ತಳ್ಳಿಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.