ADVERTISEMENT

ಬಿಹಾರದ 75 ಲಕ್ಷ ಮಹಿಳೆಯರ ಖಾತೆಗೆ ತಲಾ ₹10,000 ಜಮೆ: ಹೊಸ ಯೋಜನೆಗೆ ಮೋದಿ ಚಾಲನೆ

ಪಿಟಿಐ
Published 26 ಸೆಪ್ಟೆಂಬರ್ 2025, 6:41 IST
Last Updated 26 ಸೆಪ್ಟೆಂಬರ್ 2025, 6:41 IST
   

ಪಟ್ನಾ: ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯದ 75 ಲಕ್ಷ ಮಹಿಳೆಯರ ಖಾತಗೆ ತಲಾ ₹10,000 ಜಮೆ ಆಗಿದೆ.

₹7,500 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸ್ವಯಂ ಉದ್ಯೋಗದ ಮೂಲಕ ಮಹಿಳೆಯರ ಸಬಲೀಕರಣದ ಉದ್ದೇಶ ಹೊಂದಿರುವುದಾಗಿ ಬಿಹಾರದ ಎನ್‌ಡಿಎ ಸರ್ಕಾರ ಹೇಳಿದೆ.

ವರ್ಚುವಲ್ ಆಗಿ ದೆಹಲಿಯಿಂದಲೇ ಮೋದಿ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಸಚಿವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಿದ್ದರು. ಭಾರಿ ಪ್ರಮಾಣದ ಫಲಾನುಭವಿ ಮಹಿಳೆಯರು ಸಹ ವಿಡಿಯೊ ಕಾನ್ಫರೆನ್ಸ್ ಸೇರಿಕೊಂಡಿದ್ದರು.

ADVERTISEMENT

'ಈ ಯೋಜನೆಯಡಿಯಲ್ಲಿ, ಪ್ರತಿ ಕುಟುಂಬದಿಂದ ಒಬ್ಬ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡಲಾಗುವುದು. ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರತಿಯೊಬ್ಬ ಫಲಾನುಭವಿಯು ನೇರ ವರ್ಗಾವಣೆಯ ಮೂಲಕ ಆರಂಭಿಕ ₹10,000 ಸಹಾಯಧನವನ್ನು ಪಡೆದಿದ್ದಾರೆ. ನಂತರದ ಹಂತಗಳಲ್ಲಿ ₹2 ಲಕ್ಷವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲದ ಸಾಧ್ಯತೆಯಿದೆ.

ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ ಪ್ರಮಾಣದ ಉದ್ಯಮಗಳು ಸೇರಿದಂತೆ ಫಲಾನುಭವಿಯ ಆಯ್ಕೆಯ ಕ್ಷೇತ್ರಗಳಲ್ಲಿ ಈ ಸಹಾಯಧನವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.