
ಎಐ ಚಿತ್ರ
ನವದೆಹಲಿ: ರಸ್ತೆಗಳಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಆಳುದ್ದದ ಗುಂಡಿಗಳನ್ನು ತೋಡಿ ಹಾಗೇ ಬಿಟ್ಟು ಹೋಗಿ, ಅದರಲ್ಲಿ ದಾರಿಹೋಕರು, ಬೈಕ್ ಸವಾರರು ಬಿದ್ದು ಕಷ್ಟ ಅನುಭವಿಸಿರುವ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಅಂಥದ್ದೇ ಘಟನೆಯೊಂದು ದೇಶದ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಹೌದು, 25 ವರ್ಷದ ಕಮಲ್ ಧ್ಯಾನಿ ಎಂಬ ವ್ಯಕ್ತಿಯೊಬ್ಬಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ತೋಡಲಾಗಿದ್ದ 20 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದೆ. ಗುಂಡಿಗೆ ಯಾವುದೇ ಸೂಚನಾ ಫಲಕ ಹಾಕಿರಲಿಲ್ಲ. ಕೆಲ ಸಮಯ ನೆರವಿಗೆ ಅಂಗಲಾಚಿದ ಆತ, ಯಾವುದೇ ಸಹಾಯ ಸಿಗದೇ ಮೃತಪಟ್ಟಿದ್ದಾನೆ.
ಬೈಕ್ ಸವಾರ ಗುಂಡಿಗೆ ಬಿದ್ದಿರುವುದನ್ನು ಕೆಲವರು ನೋಡಿದ್ದರು.. ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಗುತ್ತಿಗೆದಾರು ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾವುದೇ ತುರ್ತು ಸಹಾಯವಾಣಿಗೆ ಕರೆ ಮಾಡಲಿಲ್ಲ. ಯಾವುದೇ ರಕ್ಷಣಾ ಪ್ರಯತ್ನ ಮಾಡಿಲ್ಲ. ಮರುದಿನ ಕುಟುಂಬ ವರ್ಗ ಆತನ ಮೃತದೇಹವನ್ನು ಪತ್ತೆ ಮಾಡಿದೆ ಎಂದು ವರದಿ ತಿಳಿಸಿದೆ.
ಬ್ಯಾರಿಕೇಡ್ ಇಲ್ಲ, ಬೀದಿ ದೀಪವೂ ಇಲ್ಲ
ಖಾಸಗಿ ಬ್ಯಾಂಕ್ ಉದ್ಯೋಗಿರುವ ಕಮಲ್ ಧ್ಯಾನಿ, ಜನಕಪುರಿಯಲ್ಲಿ ದೆಹಲಿ ಜಲ ಮಂಡಳಿ(ಡಿಜೆಬಿ) ಒಳಚರಂಡಿ ಕೆಲಸಕ್ಕಾಗಿ ಅಗೆದ 15ರಿಂದ 20 ಅಡಿ ಆಳದ ಗುಂಡಿಗೆ ಬಿದ್ದಿದ್ದಾನೆ. ಅಲ್ಲಿ ಯಾವುದೇ ಬ್ಯಾರಿಕೇಡ್ ಅಥವಾ ಸೂಚನಾ ಫಲಕಗಳಿರಲಿಲ್ಲ. ಬೀದಿ ದೀಪಗಳೂ ಇಲ್ಲದ ಕಾರಣ ಕತ್ತಲು ಆವರಿಸಿತ್ತು ಎಂದು ವರದಿ ತಿಳಿಸಿದೆ.
ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ಅವರು ಗುಂಡಿಗೆ ಬಿದ್ದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮನೆಗೆ ತಲುಪುವುದಾಗಿ ಧ್ಯಾನಿ, ಸ್ನೇಹಿತರಿಗೆ ಅಂತಿಮ ಕರೆ ಮಾಡಿದ್ದರು. ಆದರೆ, ಧ್ಯಾನಿ ಬಹಳ ಸಮಯ ಕಳೆದರೂ ಮನೆಗೆ ಹೋಗದೇ ಇದ್ದುದರಿಂದ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಸಂಬಂಧಿಕರು ಧ್ಯಾನಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ನೆರವಿಗೆ ಬಾರದ ಗುತ್ತಿಗೆದಾರ
ಹಿರಿಯ ಪೊಲೀಸ್ ಅಧಿಕಾರಿ ದಾರದೆ ಶರದ್ ಭಾಸ್ಕರ್ ಅವರ ಪ್ರಕಾರ, ಮದುವೆಯಿಂದ ಹಿಂದಿರುಗುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಬೈಕ್ ಹೊಂಡಕ್ಕೆ ಬೀಳುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಅವರು ಸಮೀಪದಲ್ಲಿದ್ದ ಕೆಲಸಗಾರ ಯೋಗೇಶ್ ಎಂಬುವವನಿಗೆ ಮಾಹಿತಿ ನೀಡಿದ್ದಾರೆ. ಯೋಗೇಶ್ ಗುಂಡಿ ಒಳಗೆ ಇಣುಕಿ ನೋಡಿದಾಗ ಬೈಕ್‌ನ ಹೆಡ್‌ಲೈಟ್ ಆನ್ ಆಗಿದ್ದು, ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ, ಗುತ್ತಿಗೆದಾರ ರಾಜೇಶ್ ಪ್ರಜಾಪತಿಗೆ ಮಾಹಿತಿ ನೀಡಿದ್ದರು. ರಾಜೇಶ್ ಕೆಲ ನಿಮಿಷಗಳಲ್ಲಿ ಕಾರಿನಲ್ಲಿ ಸ್ಥಳಕ್ಕೆ ಬಂದರು. ಅಲ್ಲಿ ಗುಂಡಿಗೆ ಮೋಟಾರ್ ಸೈಕಲ್ ಬಿದ್ದಿರುವುದು ಅವರ ಗಮನಕ್ಕ ಬಂದಿತು. ಆದರೂ ರಕ್ಷಣೆಗೆ ಏನೂ ಪ್ರಯತ್ನ ಮಾಡಲಿಲ್ಲ. ಪೊಲೀಸರಿಗೆ ಅಥವಾ ತುರ್ತು ಸೇವೆಗಳಿಗೆ ಕರೆ ಮಾಡಲಿಲ್ಲ. ಆ್ಯಂಬುಲೆನ್ಸ್ ಸಹ ಕರೆಯಲಿಲ್ಲ ಎಂದು ವರದಿ ತಿಳಿಸಿದೆ.
ಬಹಳ ಸಮಯವಾದರೂ ಧ್ಯಾನಿ ಮನೆಗೆ ಬರದಿದ್ದಾಗ ಕುಟುಂಬ ಸದಸ್ಯರು ಗುಂಡಿಬಳಿಗೆ ಬಂದು ಕಾರ್ಮಿಕರ ಬಳಿ ವಿಚಾರಿಸಿದಾಗಲೂ ಅವರು ಏನೂ ಹೇಳಲ್ಲಿಲ್ಲ ಕುಟುಂಬಸ್ಥರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಟುಂಬಸ್ಥರ ಹೇಳಿಕೆಯನ್ನೂ ಅಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಡಿಸಿಪಿ ಹೇಳಿದ್ದಾರೆ. ಇದಕ್ಕೆ ಯಾರು ಜವಾಬ್ದಾರರೋ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಪೊಲೀಸರಿಂದಲೂ ಸಹಾಯ ಸಿಕ್ಕಿಲ್ಲ
ಆದರೆ, ಇಲ್ಲಿ ಸಾರ್ವಜನಿಕರ ನಿರಾಸಕ್ತಿ ಮತ್ತು ಗುತ್ತಿಗೆದಾರರ ಉದಾಸೀನತೆ ಮಾತ್ರವಲ್ಲಿ, ಪೊಲೀಸರು ಸಹ ತಪ್ಪಿತಸ್ಥರು. ಕಮಲ್ ರಾತ್ರಿಯಿಡೀ ಗುಂಡಿಯಲ್ಲಿ ಇದ್ದರು. ಅವರ ಕುಟುಂಬವು ಅವರನ್ನು ಹುಡುಕುತ್ತಿತ್ತು. ಕಮಲ್ ಅವರ ಸಹೋದರ ಕರಣ್ ಧ್ಯಾನಿ, ರಾತ್ರಿಯಿಡೀ ಅವರನ್ನು ಹುಡುಕಾಟ ನಡೆಸಿದ್ದರು. ಅಲ್ಲದೆ, ದಾಬ್ರಿ, ವಿಕಾಸಪುರಿ ಮತ್ತು ಸಾಗರ್‌ಪುರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮನವಿ ಮಾಡಿದ್ದರು. ಆದರೆ, ಪೊಲೀಸರು ಅವರ ನೆರವಿಗೆ ಬರಲಿಲ್ಲ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.