ADVERTISEMENT

ಬಿಲ್ಕಿಸ್ ಬಾನು ಅತ್ಯಾಚಾರ, ಕೊಲೆ ಪ್ರಕರಣ: ನಿಯಮ ನಿರ್ಲಕ್ಷ್ಯ, ಕೈದಿಗಳ ಬಿಡುಗಡೆ

ಅತ್ಯಾಚಾರಿಗಳ ಶಿಕ್ಷೆ ಕಡಿತಕ್ಕೆ ರಾಜಕೀಯ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:44 IST
Last Updated 16 ಆಗಸ್ಟ್ 2022, 21:44 IST
   

ನವದೆಹಲಿ: ಅತ್ಯಾಚಾರ ಅಪರಾಧಿಗಳು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬಾರದು ಎಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಮಾರ್ಗಸೂಚಿಯನ್ನು ಗುಜರಾತ್‌ ಸರ್ಕಾರವು ಗಾಳಿಗೆ ತೂರಿದೆ. ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಮತ್ತು ಅವರ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳಿಗೆ ಗುಜರಾತ್‌ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ಶಿಕ್ಷೆ ಅವಧಿ ಕಡಿತಗೊಳಿಸಿ, ಬಿಡುಗಡೆ ಮಾಡಿದೆ.

21 ವರ್ಷ ವಯಸ್ಸಿನ ಬಿಲ್ಕಿಸ್‌ ಬಾನು ಮೇಲೆ 2002ರ ಗೋಧ್ರಾ ಹತ್ಯಾಕಾಂಡದ ನಂತರದಲ್ಲಿ ಈ 11 ಮಂದಿ ಅತ್ಯಾಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು 5 ತಿಂಗಳ ಗರ್ಭಿಣಿ ಆಗಿದ್ದರು. ಅಪರಾಧಿಗಳನ್ನು ಸ್ವಾಂತಂತ್ರ್ಯದ ದಿನವೇ ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಕೈದಿಗಳನ್ನು ಬಿಡುಗಡೆ ಮಾಡುವ ಸಂಬಂಧ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿತ್ತು. ಅತ್ಯಾಚಾರಿಗಳು, ಮಾನವ ಕಳ್ಳಸಾಗಣೆದಾರರು, ಡ್ರಗ್ಸ್‌ ಪ್ರಕರಣ ಗಳಲ್ಲಿ ಶಿಕ್ಷೆಗೆ ಒಳಗಾದವರನ್ನು ಬಿಡುಗಡೆ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿ ರಾಧೆಶ್ಯಾಮ್‌ ಶಾ, ಅವಧಿಪೂರ್ವ ಬಿಡುಗಡೆಗೆ ಕೋರಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ADVERTISEMENT

11 ಮಂದಿಯನ್ನು ಬಿಡುಗಡೆ ಮಾಡುವ ಕುರಿತು ಜುಲೈ 1992ರ ನೀತಿಯ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಯಾರನ್ನು ಬಿಡಗಡೆ ಮಾಡಬೇಕು ಮತ್ತು ಬಿಡುಗಡೆ ಮಾಡಬಾರದು ಎಂಬುದನ್ನು ಕೇಂದ್ರ ಸ್ಪಷ್ಟವಾಗಿ ಹೇಳಿತ್ತು.

ಕೈದಿಗಳ ಸಂತಸ: ಜೈಲಿನಿಂದ ಹೊರ ಬಂದ 11 ಮಂದಿ ಯೂ ಸಂತಸ ವ್ಯಕ್ತಪಡಿಸಿದ್ದಾರೆ. ಜೈಲಿನಿಂದ ಹೊರಬಂದ ಕೈದಿಗಳಿಗೆ ಹಾರ ಹಾಕಿ, ಸಿಹಿ ಹಂಚಿ ಸ್ವಾಗತಿಸಲಾಯಿತು.

ನಿಜವಾದ ಮೋದಿ ಯಾರು?– ಕಾಂಗ್ರೆಸ್‌
ನವದೆಹಲಿ: ಕೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ನಾರಿಶಕ್ತಿ’ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಗುಜರಾತ್‌ ಸರ್ಕಾರ ಈ ಕ್ರಮಕೈಗೊಂಡಿದೆ. ಇದು ಬಿಜೆಪಿಯ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.

ನಿಜವಾದ ನರೇಂದ್ರ ಮೋದಿ ಯಾರು? ಕೆಂಪುಕೋಟೆಯ ಮೇಲೆ ಸುಳ್ಳು ಹೇಳಿದವರೇ ಅಥವಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗುಜರಾತ್‌ ಸರ್ಕಾರದ ಮೂಲಕ ಜೈಲಿನಿಂದ ಬಿಡುಗಡೆ ಮಾಡಿಸಿದವರೇ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ವ್ಯಂಗ್ಯವಾಡಿದರು.

ಸಂದೇಶ ಸ್ಪಷ್ಟ: ಒವೈಸಿ
ಮಹಿಳೆಯ ಗೌರವಕ್ಕೆ ಧಕ್ಕೆ ತರುವಂಥ ಕೆಲಸ ಮಾಡುವುದಿಲ್ಲ ಎಂದು ಭಾರತೀಯರು ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಭಾಷಣ ಮಾಡಿದ್ದರು. ಆದರೆ, ಗುಜರಾತ್‌ ಸರ್ಕಾರ ಅತ್ಯಾಚಾರ ಅಪರಾಧಿಗಳನ್ನುಅದೇ ದಿನವೇ ಬಿಡುಗಡೆ ಮಾಡಿದೆ. ಸಂದೇಶ ಸ್ಪಷ್ಟವಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರು ಟ್ವೀಟ್‌ ಮಾಡಿದ್ದಾರೆ.

ಏನು ಹೇಳಬೇಕೋ ತಿಳಿಯುತ್ತಿಲ್ಲ:ಬಿಲ್ಕಿಸ್‌ ಬಾನು ಕುಟುಂಬ
ಅಹಮದಾಬಾದ್‌: 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಿಲ್ಕಿಸ್‌ ಬಾನು ಅವರ ಕುಟುಂಬ ಮಂಗಳವಾರ ಬೇಸರ ವ್ಯಕ್ತಪಡಿಸಿದೆ.

‘ಅಪರಾಧಿಗಳಿಗೆ ಕ್ಷಮಾಪಣೆ ನೀಡಿರುವ ವಿಷಯಮಾಧ್ಯಮಗಳ ವರದಿಗಳಿಂದ ತಿಳಿಯಿತು. ಅವಧಿಗೂ ಮುನ್ನ ಬಿಡುಗಡೆಗೆ ಕೋರಿ ಅವರು (ಅಪರಾಧಿಗಳು) ಅರ್ಜಿ ಸಲ್ಲಿಸಿದ್ದರ ಕುರಿತು ನಮಗೆ ಮಾಹಿತಿ ಇಲ್ಲ. ಗುಜರಾತ್‌ ಸರ್ಕಾರವು ಯಾವ ನ್ಯಾಯಾಲಯವ ನಿರ್ದೇಶನದ ಮೇರೆಗೆ ಕ್ಷಮಾಪಣೆ ನೀಡಿತು ಎನ್ನುವ ಕುರಿತು ನಮಗೆ ಗೊತ್ತಿಲ್ಲ. ನಮಗೆ ಯಾವ ನೋಟಿಸ್‌ ಕೂಡ ಬಂದಿಲ್ಲ. ಈ ಕುರಿತು ಯಾರೂ ನಮ್ಮೊಂದಿಗೆ ಮಾತನಾಡಿಲ್ಲ’ ಎಂದು ಬಿಲ್ಕಿಸ್‌ ಬಾನು ಅವರ ಪತಿ ತಿಳಿಸಿದರು.

‘ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಗುಜರಾತ್‌ ಸರ್ಕಾರ ₹50 ಲಕ್ಷ ಪರಿಹಾರ ನೀಡಿತು. ಉದ್ಯೋಗ ಕೊಡುವಂತೆ, ಮನೆ ಕಟ್ಟಿಸಿಕೊಡುವಂತೆಯೂ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಸರ್ಕಾರ ಈವರೆಗೂ ಉದ್ಯೋಗ ಮತ್ತು ಮನೆಯ ವ್ಯವಸ್ಥೆ ಮಾಡಿಲ್ಲ’ ಎಂದರು.

**

ನಾನು ಬಿಜೆಪಿ ಕಾರ್ಯಕರ್ತನಾಗಿದ್ದೆ. ನನ್ನೊಂದಿಗೆ ಜೈಲಿನಲ್ಲಿದ್ದ ನನ್ನ ತಮ್ಮ ಮಿತೇಶ್‌ ಕ್ಲರ್ಕ್‌ ಆಗಿದ್ದ. ನಾವು ರಾಜಕೀಯದ ಬಲಿಪಶುಗಳು.
–ಶೈಲೇಶ್‌ ಭಟ್‌, ಬಿಡುಗಡೆಗೊಂಡ ಕೈದಿ

*

ಸಣ್ಣ ಅಪರಾಧ ಎಸಗಿದ ನೂರಾರು ಮಂದಿ ಇನ್ನೂ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ, ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.
–ಶಂಶದ್‌ ಪಠಾಣ್‌, ವಕೀಲ

*

ಕೊಲೆಗಾರರು, ಅತ್ಯಾಚಾರಿಗಳು ಬಿಡುಗಡೆಯಾಗುತ್ತಾರೆ. ನ್ಯಾಯಕ್ಕಾಗಿ ಹೋರಾಡಿದ ತೀಸ್ತಾ ಸೆಟಲ್‌ವಾಡ್‌ ಅವರು ಜೈಲಿನಲ್ಲಿದ್ದಾರೆ. ಇದು ನವ ಭಾರತದ ನಿಜವಾದ ಮುಖ.
–ಸಿಪಿಎಂ

*

ಅತ್ಯಾಚಾರ ಎಸಗಿದ ರಾಕ್ಷಸರನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದೆ. ಜನರು ಯಾಕೆ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ.
–ಸಾಕೇತ್‌ ಗೋಖಲೆ, ತೃಣಮೂಲ ಕಾಂಗ್ರೆಸ್‌ ವಕ್ತಾರ

*

ಜಗತ್ತು ನೋಡುತ್ತಿದೆ. ಆದರೆ, ‘ನವ ಭಾರತ’ದಲ್ಲಿ ಇವನ್ನೆಲ್ಲಾ ಯಾರು ಕೇಳಿಸಿಕೊಳ್ಳುತ್ತಾರೆ.
–ಡ್ಯಾನಿಶ್‌ ಅಲಿ, ಬಿಎಸ್‌ಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.