
ಅಮರಾವತಿ: ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರು ಸೋಮವಾರ, ಆಂಧ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಅವರನ್ನು ರಾಜ್ಯ ಐಟಿ ಸಚಿವ ನಾರಾ ಲೋಕೇಶ್ ಹಾಗೂ ಹಿರಿಯ ಸಚಿವರು ಸ್ವಾಗತಿಸಿದ್ದಾರೆ.
‘ಬಿಲ್ ಗೇಟ್ಸ್ ಅವರಿಗೆ ಅಮರಾವತಿಗೆ ಸ್ವಾಗತ. ಗೇಟ್ಸ್ ಫೌಂಡೇಶನ್ ಸ್ಥಾಪಕರನ್ನು ಇಂದು ಗನ್ನವರಂ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದು, ನನ್ನ ಸೌಭಾಗ್ಯವಾಗಿದೆ’ ಎಂದು ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಸರ್ಕಾರವು ಗೇಟ್ಸ್ ಫೌಂಡೇಶನ್ ಜತೆಗೆ ಕೆಲಸ ಮಾಡಲು ಉತ್ಸುಕತೆಯಿಂದ ಕೂಡಿದೆ. ಆ ಮೂಲಕ ವಿವಿಧ ವಲಯಗಳಲ್ಲಿ ಸಾರ್ವಜನಿಕ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಬಿಲ್ ಗೇಟ್ಸ್ ಅವರು ಆಂಧ್ರಪ್ರದೇಶ ಸರ್ಕಾರದೊಂದಿಗೆ ಆರೋಗ್ಯ, ಕೃಷಿ, ಶಿಕ್ಷಣ ಹಾಗೂ ತಂತ್ರಜ್ಞಾನ, ಎ.ಐ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಅಮರಾವತಿ ಬಳಿಯಿರುವ ಉಂಡವಳ್ಳಿ ಗ್ರಾಮದಲ್ಲಿ ಎಐ ಹಾಗೂ ಡ್ರೋನ್ ಬಳಸಿ ಕೃಷಿ ಮಾಡುತ್ತಿರುವುದನ್ನು ಬಿಲ್ ಗೇಟ್ಸ್ ಹಾಗೂ ಅವರ ತಂಡ ವೀಕ್ಷಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ತೂರಿನ ಕುಪ್ಪಂನಲ್ಲಿ ಗೇಟ್ಸ್ ಫೌಂಡೇಶನ್ ವತಿಯಿಂದ ಆರೋಗ್ಯ ಸಂಬಂಧಿತ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅದನ್ನು ರಾಜ್ಯಾದ್ಯಂತ ವಿಸ್ತರಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮನವಿ ಮಾಡಿದ್ದರು.
ಬಿಲ್ ಗೇಟ್ಸ್ ಅವರು ಅವಿಭಜಿತ ಆಂಧ್ರಪ್ರದೇಶಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಚಂದ್ರಬಾಬು ನಾಯ್ಡು ಅವರ ಮನವಿ ಮೇರೆಗೆ ಅಮರಾವತಿಗೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.