ADVERTISEMENT

ಮಹಾರಾಷ್ಟ್ರ: ಶಾಲೆಗಳಲ್ಲಿ ಮರಾಠಿ ಕಡ್ಡಾಯ

ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಚರ್ಚೆಗೆ

ಪಿಟಿಐ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST
Varsha Gaikwad
Varsha Gaikwad   

ಮುಂಬೈ : ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಕುರಿತ ಮಸೂದೆಯನ್ನು ಸರ್ಕಾರ ಫೆ. 27ರಂದು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಿದೆ.

‘ಐಬಿ, ಐಸಿಎಸ್‌ಇ ಮತ್ತು ಸಿಬಿಎಸ್‌ಇ ಸೇರಿದಂತೆ ಎಲ್ಲಾ ಶೈಕ್ಷಣಿಕ ಮಂಡಳಿಗಳೊಂದಿಗೆ ಚರ್ಚೆ ನಡೆಸಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ವಿಧಾನಸಭೆಗೆ ಬುಧವಾರ ಮಾಹಿತಿ ನೀಡಿದರು.

ಉದ್ದೇಶಿತ ಮಸೂದೆಯು ಮಹಾರಾಷ್ಟ್ರದಲ್ಲಿ ಒಂದರಿಂದ 10ನೇ ತರಗತಿವರೆಗೆ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಪ್ರಸ್ತಾವವನ್ನು ಹೊಂದಿದೆ.

ADVERTISEMENT

ದಕ್ಷಿಣದ ರಾಜ್ಯಗಳ ಶಾಲೆಗಳಲ್ಲಿ ಸ್ಥಳೀಯ ಭಾಷೆಗಳನ್ನು ಕಲಿಸುವಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ರಾಜ್ಯ ಸರ್ಕಾರ ಅಧ್ಯಯನ ಮಾಡಿದೆ ಎಂದು ಸಚಿವೆ ನೀಡಿದ ಮಾಹಿತಿಗೆ ಶಿವಸೇನಾದ ಶಾಸಕ ಭಾಸ್ಕರ್ ಜಾಧವ್ ಆಕ್ಷೇಪ ವ್ಯಕ್ತಪಡಿಸಿದರು.

‘ದಕ್ಷಿಣ ರಾಜ್ಯಗಳ ಕಲಿಕಾ ಮಾದರಿಯನ್ನು ಅಧ್ಯಯನ ಮಾಡುವ ಅಗತ್ಯವಿರಲಿಲ್ಲ. ಸಚಿವೆ ಸರ್ಕಾರದ ನಿಲುವಿನ ಬಗ್ಗೆ ಚರ್ಚಿಸಬೇಕು’ ಎಂದು ಭಾಸ್ಕರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ವರ್ಷಾ, ‘ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.