ADVERTISEMENT

2024ರಲ್ಲಿ ಸಿರಿವಂತರ ಸಂಪತ್ತು ಮೂರುಪಟ್ಟು ಹೆಚ್ಚಳ

‘ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್’ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 15:49 IST
Last Updated 20 ಜನವರಿ 2025, 15:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದಾವೋಸ್‌: ವಿಶ್ವದಾದ್ಯಂತ ಸಿರಿವಂತರ ಸಂಪತ್ತು 2024ರಲ್ಲಿ ಎರಡು ಶತಕೋಟಿ ಡಾಲರ್‌ಗಳಷ್ಟು ವೃದ್ಧಿಸಿ, 15 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ. 

ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಸಂಪತ್ತು ವೃದ್ಧಿಸಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನವೇ ‘ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್’ ತನ್ನ ಮಹತ್ವದ ‘ಅಸಮಾನತೆಯ ವರದಿ’ಯನ್ನು ಬಿಡುಗಡೆ ಮಾಡಿದೆ.

ADVERTISEMENT

ಏಷ್ಯಾದಲ್ಲಿ ಸಿರಿವಂತರ ಸಂಪತ್ತು 2024ರಲ್ಲಿ 299 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫ್ಯಾಮ್ ತನ್ನ ವರದಿಯಲ್ಲಿ ಹೇಳಿದ್ದು, ಒಂದು ದಶಕದೊಳಗೆ ಕನಿಷ್ಠ ಐದು ಮಂದಿ ಶತಕೋಟ್ಯಧಿಪತಿಗಳು ಏಷ್ಯಾದಲ್ಲಿ ಇರಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

2024ರಲ್ಲಿ ಜಾಗತಿಕವಾಗಿ 204 ಹೊಸ ಸಿರಿವಂತರ ಸೇರ್ಪಡೆಯಾಗಿದೆ. ಪ್ರತಿ ವಾರ ಸರಾಸರಿ ನಾಲ್ಕು ಮಂದಿ ಸಿರಿವಂತರ ಉದಯವಾಗಿದ. ಏಷ್ಯಾದಲ್ಲಿಯೇ ವರ್ಷದಲ್ಲಿ 41 ಮಂದಿ ಹೊಸ ಸಿರಿವಂತರ ಉದಯವಾಗಿದೆ ಎಂದು ಅದು ಹೇಳಿದೆ.

‘ಟೇಕರ್ಸ್, ನಾಟ್ ಮೇಕರ್ಸ್’ ಶೀರ್ಷಿಕೆಯ ತನ್ನ ವರದಿಯಲ್ಲಿ ಆಕ್ಸ್‌ಫ್ಯಾಮ್, ಗ್ಲೋಬಲ್‌ ನಾರ್ತ್‌ನ ಶೇಕಡ 1ರಷ್ಟು ಶ್ರೀಮಂತರು 2023ರಲ್ಲಿ ಹಣಕಾಸು ವ್ಯವಸ್ಥೆಗಳ ಮೂಲಕ ಗ್ಲೋಬಲ್ ಸೌತ್‌ನಿಂದ ಗಂಟೆಗೆ 30 ದಶಲಕ್ಷ ಡಾಲರ್‌ ಗಳಿಸಿದ್ದಾರೆ ಎಂದು ‌ಹೇಳಿದೆ.

ಶೇ 60 ಸಿರಿವಂತರ ಸಂಪತ್ತು ಈಗ ಪಿತ್ರಾರ್ಜಿತವಾಗಿ, ಅಧಿಕಾರದ ಏಕಸ್ವಾಮ್ಯ ಅಥವಾ ಬಂಡವಾಳಶಾಹಿ ಸಂಪರ್ಕಗಳಿಂದ ಗಳಿಸಿರುವುದಾಗಿದೆ ಎಂದು ಅದು ಹೇಳಿದೆ.

ಸಂಪತ್ತಿನ ಅಸಮಾನತೆ ಹಂಚಿಕೆ ತಗ್ಗಿಸಲು, ವಿಪರೀತ ಸಂಪತ್ತಿನ ಸಂಗ್ರಹ ಕೊನೆಗೊಳಿಸಲು ಹಾಗೂ ಹೊಸ ಶ್ರೀಮಂತರ ಉದಯ ತಡೆಯಲು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ವಿಶ್ವದಾದ್ಯಂತದ ಸರ್ಕಾರಗಳನ್ನು ಒತ್ತಾಯಿಸಿರುವ ಈ ಗುಂಪು, ಹಿಂದಿನ ವಸಾಹತುಶಾಹಿ ಶಕ್ತಿಗಳು, ಈ ಹಿಂದೆ ಉಂಟು ಮಾಡಿರುವ ಹಾನಿಗಳಿಗೆ ಪರಿಹಾರ ಕೂಡ ಭರಿಸಬೇಕು ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.