ADVERTISEMENT

ಕೇರಳದ 2 ಜಿಲ್ಲೆಗಳಲ್ಲಿ ಹಕ್ಕಿಜ್ವರ ಉಲ್ಬಣ: ಮುನ್ನೆಚ್ಚರಿಕೆ ಕ್ರಮ ಜಾರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 14:37 IST
Last Updated 23 ಡಿಸೆಂಬರ್ 2025, 14:37 IST
   

ಅಲಪ್ಪುಳ(ಕೇರಳ): ಕೇಂದ್ರೀಯ ಪ್ರಯೋಗಾಲಯ‌ ಆಲಪ್ಪುಳ ಮತ್ತು ಕೋಟಯಂ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿರುವ ಕೋಳಿ ಫಾರ್ಮ್‌ಗಳಲ್ಲಿರುವ ಕೋಳಿಗಳಿಗೆ ಹಕ್ಕಿಜ್ವರ ತಗುಲಿರುವುದು ದೃಢಪಟ್ಟ ನಂತರ ರಾಜ್ಯ ಪಶು ಸಂಗೋಪನಾ ಇಲಾಖೆ ಮಂಗಳವಾರ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಆಲಪ್ಪುಳ ಜಿಲ್ಲೆಯ ನೆಡುಮುಡಿ, ಚೆರುತನ, ಕರುವಾಟ್ಟ, ಕಾರ್ತಿಕಪಳ್ಳಿ, ದಕ್ಷಿಣ ಅಂಬಲಪ್ಪುಳ, ದಕ್ಷಿಣ ಪುನ್ನಪ್ರ, ತಕಝಿ, ಪುರಕ್ಕಾಡ್ ಭಾಗದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕೋಟಯಂ ಜಿಲ್ಲೆಯಲ್ಲಿ ಕುರುಪ್ಪಂದರ, ಕಲ್ಲುಪುರಯ್ಕಲ್ ಮತ್ತು ವೇಳೂರ್ ಕೆಲವು ಭಾಗಗಳ ಕೋಳಿ ಫಾರ್ಮ್‌ಗಳಲ್ಲಿ ಹಕ್ಕಿಜ್ವರ ವ್ಯಾಪಿಸಿಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

'ಒಂದು ವಾರದ ಹಿಂದೆ ಹಕ್ಕಿಜ್ವರದ ಪ್ರಕರಣಗಳು ನಮ್ಮ ಗಮನಕ್ಕೆ ಬಂದವು. ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಗಳು ಎರಡೂ ಜಿಲ್ಲೆಗಳಲ್ಲಿ ಹಕ್ಕಿಜ್ವರ ಹರಡುತ್ತಿರುವುದನ್ನು ದೃಢಪಡಿಸಿವೆ’ ಎಂದು ಪಶು ಸಂಗೋಪನಾ ಸಚಿವೆ ಜೆ. ಚಿಂಚು ರಾಣಿ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

‘ಹಕ್ಕಿಜ್ವರ ಹರಡುವಿಕೆಯನ್ನು ತಡೆಗಟ್ಟಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಈವರೆಗೆ ಕೋಳಿ ಉತ್ಪನ್ನಗಳ ಸೇವೆನಯ ಮೇಲೆ ನಿರ್ಬಂಧಗಳನ್ನು ವಿಧಿಸಿಲ್ಲ. ವರದಿಯ ವಿಶ್ಲೇಷಣೆಯ ನಂತರ ಅಗತ್ಯವೆನಿಸಿದರೆ, ಕೋಳಿ ಮಾಂಸ ಸೇವೆನಯ ಮೇಲಿನ ನಿರ್ಬಂಧ ವಿಧಿಸುವ ಮತ್ತು ಸೋಂಕು ಬಾಧಿತ ಕೋಳಿಗಳನ್ನು ಕೊಲ್ಲುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.