ನವದೆಹಲಿ: ಮುಖ್ಯಮಂತ್ರಿ ಹಾಗೂ ಸಚಿವರ ಮೊಬೈಲ್ ಭತ್ಯೆ ಮಿತಿಯನ್ನು ಪರಿಷ್ಕರಿಸಿರುವ ದೆಹಲಿ ಸರ್ಕಾರದ ನಿರ್ಣಯವು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ನಡುವೆ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರವು ಬಡವರ ವಿರೋಧಿಯಾಗಿದ್ದು, ದುಬಾರಿ ಫೋನ್‌ಗಳನ್ನು ಸಚಿವರಿಗೆ ಉಡಗೊರೆ ನೀಡುತ್ತಾ ಸಂಭ್ರಮದಲ್ಲಿ ಮುಳುಗಿದೆ ಎಂದು ಆಪ್ ಆರೋಪಿಸಿದೆ.
ಮುಖ್ಯಮಂತ್ರಿ ಬಳಸುವ ಮೊಬೈಲ್ ಫೋನ್ ಭತ್ಯೆಯನ್ನು ₹1.5 ಲಕ್ಷಕ್ಕೆ ನಿಗದಿಪಡಿಸಿ, ಸಚಿವರು ₹1.25 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಖರೀದಿಸಲು ಮಿತಿ ನಿಗದಿಪಡಿಸಿರುವುದಾಗಿ ದೆಹಲಿ ಸರ್ಕಾರ ಜುಲೈ 9ರಂದು ಪ್ರಕಟಣೆ ಹೊರಡಿಸಿತ್ತು.
ಈ ಬಗ್ಗೆ ಆಪ್‌ನ ದೆಹಲಿ ಘಟಕದ ಮುಖ್ಯಸ್ಥ ಸೌರಬ್ ಭಾರದ್ವಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಚಿವರಿಗೆ, ಶಾಸಕರಿಗೆ ಶುಭಕೋರುವ ಮೂಲಕ ಲೇವಡಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆಪ್ ಶಾಸಕ ಅನಿಲ್ ಝಾ, ‘₹1 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿದ್ದರೂ ಬಿಜೆಪಿ ಸರ್ಕಾರವು ಮಹಿಳೆಯರಿಗೆ ₹ 2,500 ಧನಸಹಾಯ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಉದ್ಯೋಗ ನೀಡುವ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇತ್ತ ಸಚಿವರಿಗೆ ದುಬಾರಿ ಉಡುಗೊರೆ ನೀಡುತ್ತಿದೆ’ ಎಂದಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, ‘ದಾಖಲೆಗಳ ಸಂಗ್ರಹ, ಕಚೇರಿ ಕೆಲಸದಂಥ ಪ್ರಮುಖ ಕಾರ್ಯಗಳಿಗೆ ಮೊಬೈಲ್‌ಗಳನ್ನು ಬಳಸಬೇಕಿರುವ ಕಾರಣ ಕೌನ್ಸಿಲರ್‌ಗಳು, ಶಾಸಕರೇ ಅತ್ಯಾಧುನಿಕ ಮೊಬೈಲ್‌ಗಳನ್ನ ಬಳಸುತ್ತಿದ್ದಾರೆ. ಆಪ್ ನಾಯಕರು ತಮ್ಮ ಘನತೆಗೆ ತಕ್ಕಂತೆ ಹೇಳಿಕೆಗಳನ್ನು ನೀಡುವುದು ಸೂಕ್ತ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.