ADVERTISEMENT

‘ಅಸ್ಸಾಂ ಸಂಸ್ಕೃತಿಯ ಮೇಲೆ ಬಿಜೆಪಿ ದಾಳಿ’–ರಾಹುಲ್ ಗಾಂಧಿ

ಸಿಎಎ ರದ್ಧತಿ, ಉಚಿತ್ ವಿದ್ಯುತ್, 5 ಲಕ್ಷ ಉದ್ಯೋಗ: ಕಾಂಗ್ರೆಸ್ ಪ್ರಣಾಳಿಕೆ

ಪಿಟಿಐ
Published 20 ಮಾರ್ಚ್ 2021, 21:13 IST
Last Updated 20 ಮಾರ್ಚ್ 2021, 21:13 IST
ಗುವಾಹಟಿಯ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ರಾಹುಲ್ ಗಾಂಧಿ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು ಪಿಟಿಐ ಚಿತ್ರ
ಗುವಾಹಟಿಯ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ರಾಹುಲ್ ಗಾಂಧಿ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು ಪಿಟಿಐ ಚಿತ್ರ   

ಮರೈನಿ/ಗೋಪುರ್ (ಅಸ್ಸಾಂ): ‘ಬಿಜೆಪಿಯು ಅಸ್ಸಾಂನ ಸಂಸ್ಕೃತಿ, ಭಾಷೆ, ಪರಂಪರೆ ಮತ್ತು ಭ್ರಾತೃತ್ವದ ಮೇಲೆ ದಾಳಿ ನಡೆಸುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಇಂತಹ ದಾಳಿಗಳಿಂದ ಅಸ್ಸಾಂ ಅನ್ನು ರಕ್ಷಿಸಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಹುಲ್ ಗಾಂಧಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಅಸ್ಸಾಂ ಅನ್ನು ಈಗ ಹೊರಗಿನವರು ಆಳುತ್ತಿದ್ದಾರೆ. ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಅಸ್ಸಾಂ ಅನ್ನು ಆಳಬೇಕೇ ಎಂದು ಪ್ರಶ್ನಿಸಿದ ಅವರು, ಬದ್ರುದ್ದೀನ್ ಅಜ್ಮಲ್ ಅವರ ಮೇಲೆ ಬಿಜೆಪಿ ದಾಳಿ ನಡೆಸುತ್ತಲೇ ಇದೆ. ಇದು ಅಸ್ಸಾಂ ಜನರ ಮೇಲೆ ನಡೆದ ದಾಳಿ ಎಂದು ಹೇಳಿದ್ದಾರೆ.

ADVERTISEMENT

‘ನಿಮ್ಮ ಹಣವನ್ನು ಬಳಸಿಕೊಂಡು₹ 2,000 ಕೋಟಿ ವೆಚ್ಚದಲ್ಲಿ ಗುವಾಹಟಿ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿತು. ಆನಂತರ, ಆ ವಿಮಾನ ನಿಲ್ದಾಣವನ್ನು ಮೋದಿ ಅವರು ತಮ್ಮ ಉದ್ಯಮಿ ಗೆಳೆಯ ಅದಾನಿ ಅವರಿಗೆ ನೀಡಿದರು. ಹೀಗೆ ದೇಶದಲ್ಲಿನ ಎಲ್ಲಾ ಸಂಪತ್ತನ್ನು ಮೋದಿ ಅವರು ತಮ್ಮ ಉದ್ಯಮಿ ಗೆಳೆಯರಿಗೆ ನೀಡುತ್ತಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಲಾಗುವುದು. ರಾಜ್ಯದ 5 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಎಲ್ಲಾ ಮನೆಗಳಿಗೆ 200 ಯುನಿಟ್‌ನಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಪ್ರತಿ ಗೃಹಿಣಿಗೆ ಮಾಸಿಕ₹ 2,000 ವೇತನ ನೀಡುತ್ತೇವೆ. ಚಹಾ ತೋಟದ ಕಾರ್ಮಿಕರ ಕನಿಷ್ಠ ಕೂಲಿಯನ್ನು₹ 365ಕ್ಕೆ ಹೆಚ್ಚಿಸಲಾಗುವುದು ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.

‘ಕಾಂಗ್ರೆಸ್, ನೀಡಿರುವ ಭರವಸೆಗಳನ್ನು ಈಡೇರಿಸುತ್ತದೆ. ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸಗಡದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದೆವು. ಸರ್ಕಾರ ರಚನೆಯಾದ ಆರು ತಿಂಗಳಲ್ಲೇ ಸಾಲವನ್ನು ಮನ್ನಾ ಮಾಡಿದ್ದೇವೆ’ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.