ADVERTISEMENT

‘ಇಂಡಿಯಾ’ ಕೂಟದ ಆತ್ಮಸಾಕ್ಷಿ ಸತ್ತುಹೋಗಿದೆ: ಬಿಜೆಪಿ ಟೀಕೆ

ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಆರೋಪ

ಪಿಟಿಐ
Published 24 ಮಾರ್ಚ್ 2024, 13:50 IST
Last Updated 24 ಮಾರ್ಚ್ 2024, 13:50 IST
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ
ಪಿಟಿಐ ಚಿತ್ರ
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಪಿಟಿಐ ಚಿತ್ರ   

ಚೆನ್ನೈ: ತಮಿಳುನಾಡು ಸಚಿವರಾದ ಅನಿತ ರಾಧಾಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿರುವ ಬಿಜೆಪಿಯು, ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದೆ. ‘ವಿರೋಧ ಪಕ್ಷಗಳ ಮೈತ್ರಿಕೂಟದ ಆತ್ಮಸಾಕ್ಷಿ ಸತ್ತುಹೋಗಿದೆ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. 

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ಅನಿತ ರಾಧಾಕೃಷ್ಣನ್ ಅವರ ವಿವಾದಿತ ವಿಡಿಯೊವನ್ನು ‘ಎಕ್ಸ್‌’ ವೇದಿಕೆಯಲ್ಲಿ ಹಂಚಿಕೊಂಡು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

‘ಡಿಎಂಕೆ ಮುಖಂಡರು ತಮ್ಮ ‘ಒರಟು ವರ್ತನೆ’ಯಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದು, ಅನಿತ ಅವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸುವಂತೆ ಪಕ್ಷವು ಚುನಾವಣಾ ಆಯೋಗಕ್ಕೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಿದೆ’ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ADVERTISEMENT

‘ಡಿಎಂಕೆ ಸಂಸದೆ ಕೆ.ಕನಿಮೊಳಿ ಮತ್ತು ಇತರರ ಸಮ್ಮುಖದಲ್ಲಿ ರಾಧಾಕೃಷ್ಣನ್ ‘ಅಸಹ್ಯಕರ’ವಾಗಿ ಮಾತನಾಡಿದ್ದು, ಅವರೆಲ್ಲ ‘ಹೇಸಿಗೆ ಹುಟ್ಟಿಸುವ ಕ್ರಿಯೆ’ಗೆ ಸಾಕ್ಷಿಯಾಗಿದ್ದಾರೆ. ಇದು ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಅಸಭ್ಯ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಪ್ರಜಾಪ್ರಭುತ್ವದಲ್ಲಿ ಅಂತಹ ಭಾಷೆಗೆ ಸ್ಥಾನವಿಲ್ಲ. ಮನುಷ್ಯನ ವಿನಾಶ ಸಂಭವಿಸುವಾಗ ಮೊದಲು ಅವನ ಆತ್ಮಸಾಕ್ಷಿ ಸಾಯುತ್ತದೆ. ‘ಇಂಡಿಯಾ’ ಮೈತ್ರಿಕೂಟದಲ್ಲಿರುವವರ ಆತ್ಮಸಾಕ್ಷಿಯೂ ಸತ್ತುಹೋಗಿದೆ.  -ಅನುರಾಗ್ ಠಾಕೂರ್ ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.